ADVERTISEMENT

ಇನ್ನು ಮುಂದೆ ಎಂಜಿನಿಯರಿಂಗ್ ಪದವೀಧರರಿಗೂ ಶಿಕ್ಷಕ ಹುದ್ದೆ

ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 7:46 IST
Last Updated 8 ಡಿಸೆಂಬರ್ 2020, 7:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ (6ರಿಂದ 8ನೇ ತರಗತಿ) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ತಿದ್ದುಪಡಿಯಿಂದ ಇನ್ನು ಮುಂದೆ ಎಂಜಿನಿಯರಿಂಗ್‌ ಪದವೀಧರರಿಗೂ ಶಿಕ್ಷಕ ಹುದ್ದೆಗೆ ಅವಕಾಶ ಆಗಲಿದೆ.

‘ಈ ತಿದ್ದುಪಡಿಯಿಂದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಶಕೆ ಆರಂಭವಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

2017ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಸ್ತಿತ್ವಕ್ಕೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕ (6ರಿಂದ 8ನೇ ತರಗತಿ) ಹುದ್ದೆಗಳ ಭರ್ತಿಗಾಗಿ 2018 ಮತ್ತು 2019ರ ನೇಮಕಾತಿ ಅಧಿಸೂಚನೆಗೆ ಅಗತ್ಯ ಸಂಖ್ಯೆಯ ಅಭ್ಯರ್ಥಿಗಳ ಕೊರತೆಯಿಂದ ಹೆಚ್ಚಿನ ಸ್ಥಾನಗಳು ಖಾಲಿ ಬಿದ್ದಿದ್ದವು. ಶೈಕ್ಷಣಿಕ ಸುಧಾರಣೆಗೆ, ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯತೆಯ ಅಗತ್ಯವನ್ನು ಮನಗಂಡು ವೃಂದ ನಿಯಮಗಳಿಗೆ ಕೆಲವು ತಿದ್ದುಪಡಿಯನ್ನು ಶಿಕ್ಷಣ ಇಲಾಖೆ ಪ್ರಸ್ತಾಪಿಸಿತ್ತು.

ADVERTISEMENT

‘ವೃಂದ ನಿಯಮಗಳಿಗೆ ಕೆಲವು ತಿದ್ದುಪಡಿ ಅಗತ್ಯವಾಗಿತ್ತು. ವಿಜ್ಞಾನ ಶಿಕ್ಷಕ ಹುದ್ದೆಗಳಲ್ಲಿ ಎಂಜಿನಿಯರಿಂಗ್ ಪದವೀಧರರೂ ಸೇರಿದಂತೆ ವಿವಿಧ ಪದವೀಧರರಿಗೆ ಅವಕಾಶ ಕಲ್ಪಿಸಬೇಕೆಂಬ ಪರಿಣಿತರ ಸಮಿತಿ ಅಭಿಪ್ರಾಯದಂತೆ ಈ ತಿದ್ದುಪಡಿ ಮಾಡಲಾಗಿದೆ’ ಎಂದು ಸಚಿವರು ಸಮರ್ಥನೆ ನೀಡಿದ್ದಾರೆ.

6ರಿಂದ 8ನೇ ತರಗತಿ ಪ್ರಾಥಮಿಕ ಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕ ಹುದ್ದೆಗಳಿಗೆ ಪ್ರಸ್ತುತ ಇರುವ ನಿಯಮಗಳಲ್ಲಿ ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಮಾತ್ರವೇ ಆವಕಾಶವಿತ್ತು. ಭೌತ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಪದವಿಯಲ್ಲಿ ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು, ಮೂರನೇ ವಿಷಯವನ್ನು ರಸಾಯನ ವಿಜ್ಞಾನ ವಿಷಯದ ಜೊತೆಗೆ ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್) /ಎಲೆಕ್ಟ್ರಾನಿಕ್ಸ್/ ಭೂಗೋಳಶಾಸ್ತ್ರ/ ಸ್ಟ್ಯಾಟಿಟಿಕ್ಸ್/ ಗೃಹವಿಜ್ಞಾನ ವಿಷಯಗಳಿಗೂ ಸಹ ಅವಕಾಶ ಕಲ್ಪಿಸಿದಲ್ಲಿ ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯತೆಗೆ ದಾರಿಯಾಗಲಿದ್ದು, ಶಾಲಾ ಶಿಕ್ಷಣಕ್ಕೆ ಪೂರಕವಾಗಿ ಒದಗಿ ಬರಲಿದೆ. ಪರಿಣಿತರ ತಂಡದ ಅಭಿಪ್ರಾಯದ ಪರಿಗಣಿಸಿ ಈ ವಿಷಯಗಳನ್ನು ಸಹ ಅರ್ಹ ವಿಷಯಗಳಾಗಿ ಪರಿಗಣಿಸಲಾಗುತ್ತದೆ. ಈ ಅಭ್ಯರ್ಥಿಗಳು ಬಿಇಡಿ ಮತ್ತು ಟಿಇಟಿ ಅರ್ಹತೆ ಹೊಂದಬೇಕಿರುತ್ತದೆ.

ಈ ತಿದ್ದುಪಡಿಯಿಂದಾಗಿ ನಾಲ್ಕು ವರ್ಷಗಳ ಅವಧಿಯ ಎಂಜಿನಿಯರಿಂಗ್ / ಬಿ.ಟೆಕ್ ಪದವಿ (ಆರ್ಕಿಟೆಕ್ಚರ್ ಪದವಿ ಹೊರತುಪಡಿಸಿ) ಪಡೆದ ಅಭ್ಯರ್ಥಿಗಳನ್ನು ಸಹ ಈ ಹುದ್ದೆಗಳಿಗೆ ಪರಿಗಣಿಸಬಹುದಾಗಿದೆ. ಪ್ರಸ್ತುತ ನಿಯಮಗಳಲ್ಲಿ ಸಿಬಿಝಡ್ ವಿಷಯಗಳ ಅಭ್ಯರ್ಥಿ ಅವಕಾಶವಿರಲಿಲ್ಲ. ಈ ವಿಷಯಗಳ ಅಭ್ಯರ್ಥಿಗಳ ಬೇಡಿಕೆ ಗಮನಿಸಿ ವಿಜ್ಞಾನ ಮತ್ತು ಗಣಿತ ವಿಷಯದ ಎರಡನೇ ಹುದ್ದೆ ಇರುವ ಶಾಲೆಗಳಲ್ಲಿ ಜೈವಿಕ ವಿಜ್ಞಾನ (ಬಯೋಲಜಿಕಲ್ ಸೈನ್ಸ್) ವಿಷಯವನ್ನು ಪರಿಗಣಿಸಲಾಗುತ್ತದೆ.

ಪದವಿ ಹಂತದಲ್ಲಿ ಕಡ್ಡಾಯವಾಗಿ ಮೂರು ವರ್ಷಗಳಲ್ಲಿಯೂ ರಸಾಯನಶಾಸ್ತ್ರ ಅಭ್ಯಾಸ ಮಾಡಿರುವ ಮತ್ತು ಉಳಿದಂತೆ ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ/ ರೇಷ್ಮೆ ವಿಜ್ಞಾನ/ ಪರಿಸರ ವಿಜ್ಞಾನ/ ಜೈವಿಕ ವಿಜ್ಞಾನ ವಿಷಯಗಳ್ಲಿ ಯಾವುದಾದರೂ ಎರಡು ವಿಷಯಗಳನ್ನು ಕಡ್ಡಾಯವಾಗಿ ಎಲ್ಲ 3 ವರ್ಷಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳನ್ನೂ ಇನ್ನು ಮುಂದೆ ಈ ಶಿಕ್ಷಕ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ. ಹಾಗೆಯೇ ಭಾಷಾ ಹುದ್ದೆಗಳಿಗೆ ಇತರೆ ಭಾಷೆಗಳ ಜೊತೆಗೆ ಸಂಸ್ಕೃತವನ್ನು ಸೇರ್ಪಡೆಗೊಳಿಸಲು ಮತ್ತು ಸಮಾಜ ಪಾಠಗಳ ಹುದ್ದೆಗೆ ಸಮಾಜಶಾಸ್ತ್ರ ವಿಷಯವನ್ನು ಸಹ ಸೇರ್ಪಡೆ ಮಾಡಲಾಗಿದೆ ಎಂದು ಸುರೇಶ್‌ ಕುಮಾರ್ ವಿವರಿಸಿದ್ದಾರೆ.

ಈ ಎಲ್ಲ ಅಂಶಗಳ ಜೊತೆಗೆ ನೇಮಕಾತಿ ವಿಧಾನದಲ್ಲಿ ಆಧಾರದ ಸರಾಸರಿ ಅಂಕಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಅದರಂತೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಶೇ 50, ಟಿಇಟಿಯಲ್ಲಿ ಗಳಿಸಿರುವ ಅಂಕಗಳು ಶೇ 20, ಪದವಿಯಲ್ಲಿ ಗಳಿಸಿದ ಅಂಕಗಳು- ಶೇ 20 ಮತ್ತು ಡಿಇಡಿ/ಬಿಇಡಿಯಲ್ಲಿ ಗಳಿಸಿದ ಅಂಕಗಳು-ಶೇ 10ರ ಮಾನದಂಡವನ್ನು ನಿಯಮದಲ್ಲಿ ಪ್ರಸ್ತಾಪಿಸಲಾಗಿದೆ

ಸರ್ಕಾರದ ಈ ಕ್ರಮದಿಂದ ಈ ಶಿಕ್ಷಕ ಹುದ್ದೆಗಳಿಗೆ ಹೆಚ್ಚಿನ ಅಭ್ಯರ್ಥಿಗಳ ಲಭ್ಯತೆಯಾಗಲಿದ್ದು, ಶೈಕ್ಷಣಿಕ ವೈವಿಧ್ಯತೆ, ಅಭಿವೃದ್ಧಿಗೆ ಪೂರಕವಾಗಲಿದೆ ಎಂದೂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.