ADVERTISEMENT

ನೇಮಕಾತಿ ಅಕ್ರಮ: ಮತ್ತೆ 8 ಸಹಶಿಕ್ಷಕರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 21:18 IST
Last Updated 10 ಫೆಬ್ರುವರಿ 2023, 21:18 IST
   

ಬೆಂಗಳೂರು: 2012-13 ಹಾಗೂ 2014–15ನೇ ಸಾಲಿನ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕರ ನೇಮಕಾತಿ ಅಕ್ರಮ ಸಂಬಂಧ ಮತ್ತೆ 8 ಸಹಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಇಬ್ಬರು ನಿರ್ದೇಶಕರು, ಮೂವರು ನಿವೃತ್ತ ಸಹ ನಿರ್ದೇಶಕರು, ಪ್ರಥಮ ದರ್ಜೆ ಸಹಾಯಕ, ಎಂಜಿನಿ
ಯರ್ ಹಾಗೂ 61 ಸಹಶಿಕ್ಷಕರನ್ನು ಈಗಾಗಲೇ ಬಂಧಿಸಿದ್ದಾರೆ. ಅವರೆಲ್ಲರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಮಾಹಿತಿ ಆಧರಿಸಿ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಮತ್ತೆ 8 ಸಹಶಿಕ್ಷಕರನ್ನು ಗುರುವಾರ ಸೆರೆ ಹಿಡಿದಿದ್ದಾರೆ.

ADVERTISEMENT

‘ಹಲವು ಸಹಶಿಕ್ಷಕರು ಹಣ ನೀಡಿ ಕೆಲಸ ಪಡೆದುಕೊಂಡಿದ್ದಾರೆ. ಅವರೆಲ್ಲರಿಗೂ ವಿಚಾರಣೆಗಾಗಿ ನೋಟಿಸ್ ನೀಡಲಾಗಿತ್ತು. ಬಂಧನ ಭೀತಿಯಲ್ಲಿ ವಿಚಾರಣೆಗೆ ಗೈರಾಗಿರುವ ಹಲವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ರಾಜ್ಯದ ಹಲವೆಡೆ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಲಾಯಿತು’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಾಲೆ ಹಾಗೂ ಮನೆಗಳಲ್ಲಿ 8 ಸಹಶಿಕ್ಷಕರನ್ನು ಬಂಧಿಸಲಾಗಿದೆ. ಸದ್ಯ ಅವರೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.