ADVERTISEMENT

ಅಕ್ರಮ ನೇಮಕಾತಿ: 11 ಸಹ ಶಿಕ್ಷಕರ ಬಂಧನ, ಸಿಐಡಿ ತನಿಖೆ ಶುರು

ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್: ಸಿಐಡಿ ತನಿಖೆ ಶುರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 18:59 IST
Last Updated 6 ಸೆಪ್ಟೆಂಬರ್ 2022, 18:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಪ್ರೌಢಶಾಲೆಗಳ ಗ್ರೇಡ್–2 ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಎರಡು ಎಫ್‌ಐಆರ್‌ ದಾಖಲಾಗಿದ್ದು, ಈ ಪ್ರಕರಣಗಳಲ್ಲಿ 11 ಸಹ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ. ನಾಗೇಶ್ ಅವರು, ಸೆ.5ರಂದು ಹೇಳಿದ್ದರು.

2012–13 ಹಾಗೂ 2014–15ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಪ್ರೌಢ) ಅವರು ವಿಧಾನಸೌಧ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು.

ADVERTISEMENT

ಪ್ರಕರಣದ ಕಡತ ಹಾಗೂ ದಾಖಲೆಗಳನ್ನು ಸುಪರ್ದಿಗೆ ಪಡೆದಿರುವ ಸಿಐಡಿ ಅಧಿಕಾರಿಗಳು, ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ ಕರ್ತವ್ಯನಿರತ 11 ಸಹ ಶಿಕ್ಷಕರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗೆ ವಿಶೇಷ ತಂಡ ತನಿಖೆ ಮುಂದುವರಿಸಿದೆ.

ಅನರ್ಹರಿಗೆ ನೇಮಕಾತಿ ಆದೇಶ: ‘ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇದ್ದ ಗ್ರೇಡ್–2 ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ನೇಮಕಾತಿ ಸಮಯದಲ್ಲಿ ಅನರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿತ್ತು. ಇದೇ ಆದೇಶಪಡೆದ ಕೆಲ ಸಹಶಿಕ್ಷಕರು ಕೆಲಸಕ್ಕೆ ಸೇರಿದ್ದರು. ಇವರ ಅಕ್ರಮದ ಸುಳಿವು ಯಾರಿಗೂ ಲಭ್ಯವಾಗಿರಲಿಲ್ಲ. ಇತ್ತೀಚೆಗೆ ಸಹ ಶಿಕ್ಷಕರ ಅಕ್ರಮ ನೇಮಕಾತಿ ಸಂಗತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು’ ಎಂದು ಮೂಲಗಳು ತಿಳಿಸಿವೆ.

‘ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಹೇಗಾಯಿತು? ಹಣದ ವ್ಯವಹಾರ ನಡೆದಿದೆಯಾ? ಎಂಬಿತ್ಯಾದಿ ಸಂಗತಿಗಳು ತನಿಖೆಯಿಂದ ಹೊರಬೀಳಬೇಕಿದೆ’ ಎಂದೂ ಮೂಲಗಳು ಹೇಳಿವೆ.‌

‘ಕೆಲ ರಾಜಕಾರಣಿಗಳ ವಿಚಾರಣೆ’:‌ ಅಕ್ರಮ ಎಸಗಿದ್ದ ಬಗ್ಗೆ ಲಭ್ಯವಾಗಿರುವ ದಾಖಲೆ ಆಧರಿಸಿ ಸದ್ಯ ಸಹಶಿಕ್ಷಕರನ್ನು ಮಾತ್ರ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ರಮದಲ್ಲಿ ನೇಮಕಾತಿ ಮಂಡಳಿಯ ಕೆಲವರು ಹಾಗೂ ಕೆಲ ರಾಜಕಾರಣಿಗಳೂ ಭಾಗಿಯಾಗಿರುವ ಅನುಮಾನವಿದ್ದು, ಅವರೆಲ್ಲರನ್ನೂ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದೆ.

‘ಪ್ರಕರಣದ ತನಿಖೆ ಹೊಣೆ ವಹಿಸಿಕೊಳ್ಳುತ್ತಿದ್ದಂತೆ ಸಹಶಿಕ್ಷಕರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಹಲವು ಪ್ರಭಾವಿಗಳ ಕೈವಾಡವಿರುವ ಶಂಕೆ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಬಂಧಿತ ಸಹ ಶಿಕ್ಷಕರ ವಿವರ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೋರನ ಕಣಿವೆ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶಮೀನಾಜ್ ಬಾನು (34), ಕಮಲಾಪುರ ಶಾಲೆಯ ನವೀನ್‌ ಹನುಮನಗೌಡ (35), ಕುಣಿಗಲ್ ತಾಲ್ಲೂಕಿನ ಕೊಡವತ್ತಿಯ ರಾಜೇಶ್ವರಿ ಜಗ್ಲಿ (35), ನಾಗಸಂದ್ರದ ಸಹ ಶಿಕ್ಷಕಿ ನಾಗರತ್ನ (42), ಅಮೃತೂರು ಶಾಲೆಯ ಬಿ.ಎನ್. ನವೀನ್‌ಕುಮಾರ್ (38), ಹೊಳಗೇರಿಪುರದ ಆರ್. ಹರೀಶ್ (37)’

ತಿಪಟೂರು ತಾಲ್ಲೂಕಿನ ಆಲ್ಬೂರ್‌ನ ಕಮಲಾ (35), ತುರುವೇಕೆರೆ ತಾಲ್ಲೂಕಿನ ಹುಲಿಕಲ್‌ ಶಾಲೆಯ ಎಚ್‌. ದಿನೇಶ್ (38), ಹುಲಿಕೆರೆಯ ಬಿ.ಎಂ. ಪ್ರಸನ್ನ (42), ಗುಬ್ಬಿ ತಾಲ್ಲೂಕಿನ ಕೆ. ಮತ್ತಿಘಟ್ಟದ ಎಸ್. ದೇವೇಂದ್ರ ನಾಯ್ಕ ಹಾಗೂ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹತ್ತಳ್ಳಿ ಗ್ರಾಮದ ಮಹೇಶ ಶ್ರೀಮಂತ ಸೊಸಲಾಡಿ (38)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.