ADVERTISEMENT

ಫೆಬ್ರುವರಿ ಬಳಿಕ ಶಿಕ್ಷಕರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 20:00 IST
Last Updated 16 ನವೆಂಬರ್ 2018, 20:00 IST
   

ಬೆಂಗಳೂರು: ‘ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಫೆಬ್ರುವರಿಯೊಳಗೆ ಅಗತ್ಯ ತಿದ್ದುಪಡಿಗಳನ್ನು ಮಾಡುತ್ತೇವೆ. ಮೇ ತಿಂಗಳ ಒಳಗೆ ವರ್ಗಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಮುಗಿಸುತ್ತೇವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶೈಕ್ಷಣಿಕ ಸ‌ಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಇಲಾಖೆಯ ತಂತ್ರಾಂಶದಲ್ಲಿನ ದೋಷಗಳಿಂದಾಗಿ ನವೆಂಬರ್‌ನಲ್ಲಿ ವರ್ಗಾವಣೆ ನಡೆಯಲಿಲ್ಲ. ಅದಲ್ಲದೆ, ಈ ಶೈಕ್ಷಣಿಕ ವರ್ಷ ಮುಗಿಯಲು ಕೇವಲ ಮೂರ್ನಾಲ್ಕು ತಿಂಗಳು ಬಾಕಿಯಿವೆ. ಈ ವೇಳೆಯಲ್ಲಿ ವರ್ಗಾವಣೆ ಮಾಡಿದರೆ, ಶಿಕ್ಷಕರ ಮಕ್ಕಳಿಗೆ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೂ ಅನಾನುಕೂಲ ಆಗಲಿದೆ’ ಎಂದು ವರ್ಗಾವಣೆಗೆ ತಡೆ ನೀಡಿರುವುದಕ್ಕೆ ಕಾರಣ ನೀಡಿದರು.

ADVERTISEMENT

‘ವರ್ಗಾವಣೆಗೊಂಡ ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೆ ಆಯಾ ಶಾಲೆಗಳಿಗೆ ಕಳುಹಿಸುತ್ತೇವೆ’ ಎಂದೂ ಸ್ಪಷ್ಟಪಡಿಸಿದರು.

ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್‌) ರದ್ದು ಮಾಡಬೇಕೆಂಬ ಶಿಕ್ಷಕರ ಬೇಡಿಕೆಗೆ ಸ್ಪಂದಿಸಿದ ಅವರು, ‘ಎನ್‌ಪಿಎಸ್‌ ಸಾಧಕ–ಬಾಧಕಗಳನ್ನು ಅಧ್ಯಯನ ಮಾಡಿ, ವರದಿ ನೀಡಲು ಸದ್ಯದಲ್ಲೆ ಸಮಿತಿಯೊಂದನ್ನು ರಚಿಸುತ್ತೇವೆ. ಆ ಬಳಿಕ ಹಳೆಯ ಯೋಜನೆಯನ್ನೆ ಮತ್ತೆ ಅಳವಡಿಸಿಕೊಳ್ಳಬೇಕೆ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ಸಂಘದ ಸಭಾಭವನ ನಿರ್ಮಾಣ‌ಕ್ಕಾಗಿ ಬೆಂಗಳೂರಿನಲ್ಲಿ ರಿಯಾಯಿತಿ ದರದಲ್ಲಿ ನಿವೇಶನವೊಂದನ್ನು ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
*
ಶಾಲೆಯ ಎಲ್ಲ ಮಕ್ಕಳ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ತುಂಬುವ ಕೆಲಸವನ್ನು ನಮ್ಮ ಮೇಲೆ ಹೊರಿಸಲಾಗಿದೆ. ಆ ಕೆಲಸವನ್ನು ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದಲೇ ಮಾಡಿಸಬೇಕು
ವಿ.ಎಂ.ನಾರಾಯಣಸ್ವಾಮಿ, ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
*

ಶಿಕ್ಷಕರ ಬೇಡಿಕೆಗಳು

* ಶಿಕ್ಷಕರ ಸ್ನೇಹಿ ವರ್ಗಾವಣೆ ಕಾಯ್ದೆ ಜಾರಿ ಮಾಡಬೇಕು

* 10,15,20,25 ವರ್ಷಗಳ ಕಾಲಮಿತಿ ಬಡ್ತಿ ನೀಡಬೇಕು

* ಎನ್‌ಪಿಎಸ್‌ ರದ್ದು ಮಾಡಬೇಕು

* ಪದವೀಧರ ಶಿಕ್ಷಕರ ಬಡ್ತಿಗಾಗಿ ಪರೀಕ್ಷೆ ನಡೆಸಬಾರದು

* ಶಿಕ್ಷಕರಿಗೆ ಪ್ರಥಮ ದರ್ಜೆ ಸಹಾಯಕರ ವೇತನ ಶ್ರೇಣಿ ನಿಗದಿ ಪಡಿಸಬೇಕು

* ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಮತ್ತು ಎಲ್‌ಕೆಜಿ,ಯುಕೆಜಿ ಪರಿಚಯಿಸಬೇಕು

* ತರಗತಿಗೊಬ್ಬರು ಶಿಕ್ಷಕ, ಶಾಲೆಗೊಬ್ಬರು ಮುಖ್ಯೋಪಾಧ್ಯಾಯರ ನಿಯುಕ್ತಿ ಮಾಡಬೇಕು

* ದೈಹಿಕ ಶಿಕ್ಷಣ ಶಿಕ್ಷಕರಿಗೆ ಸೇವಾ ಜೇಷ್ಠತೆ ಆಧರಿಸಿ ಬಡ್ತಿ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.