ADVERTISEMENT

ಪ್ರಶಸ್ತಿಗೆ ಕಲ್ಯಾಣ ನಿಧಿ ಹಣ ಬಳಕೆ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 19:31 IST
Last Updated 3 ಸೆಪ್ಟೆಂಬರ್ 2021, 19:31 IST

ಬೆಂಗಳೂರು:ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ 31 ಶಿಕ್ಷಕರಿಗೆ ನಗದು ಪುರಸ್ಕಾರ ಹಾಗೂ ಅವರ ಶಾಲೆಗಳ ಅಭಿವೃದ್ಧಿಗೆ ಅನುದಾನ ನೀಡಲು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ನಿಧಿಯ ಹಣ ಬಳಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನುಅಖಿಲ ಭಾರತ ಶಿಕ್ಷಕರ ಫೆಡರೇಷನ್ ಆಕ್ಷೇಪಿಸಿದೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿರುವ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ, ‘ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ನಿಧಿಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣದಿಂದ ಸ್ಥಾಪಿತವಾದ ನಿಧಿ. ಇಂತಹ ನಿಧಿಯಿಂದ ಸರ್ಕಾರದಿಂದ ನೀಡುವ ಪ್ರಶಸ್ತಿಗೆ ನಗದು ಬಹುಮಾನ ನೀಡಲು ಹಾಗೂ ಶಾಲಾಭಿವೃದ್ಧಿಗೆ ಬಳಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಸರ್ಕಾರದ ಖಜಾನೆಯಿಂದಲೇ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ನೀಡುವ ತಲಾ ₹10 ಸಾವಿರ ಮತ್ತು ಅವರ ಶಾಲೆಗಳ ಅಭಿವೃದ್ಧಿಗೆ ತಲಾ ₹50 ಸಾವಿರ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ.

ಪ್ರಶಸ್ತಿ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಶಸ್ತಿಯ ಮೊತ್ತವನ್ನು ಕಲ್ಯಾಣ ನಿಧಿಯಿಂದ ಭರಿಸಬೇಕು ಎಂದು ಆದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.