ADVERTISEMENT

ಭೂಕುಸಿತ ಅಧ್ಯಯನಕ್ಕೆ ತಜ್ಞರ ತಂಡ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 20:37 IST
Last Updated 29 ಜುಲೈ 2021, 20:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಯಲ್ಲಾಪುರ/ಶಿರಸಿ (ಉತ್ತರ ಕನ್ನಡ): ‘ಪಶ್ಚಿಮಘಟ್ಟದಲ್ಲಿ ಮಳೆಯಿಂದ ಭೂಕುಸಿತವಾಗುತ್ತಿರುವ ಕುರಿತು ಅಧ್ಯಯನಕ್ಕಾಗಿ ಭೂಗರ್ಭ ಶಾಸ್ತ್ರಜ್ಞರನ್ನು ಒಳಗೊಂಡ ತಜ್ಞರ ತಂಡ ನೇಮಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಳೆಯಿಂದ ಹಾನಿಗೀಡಾದ ಪ್ರದೇಶಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ‘ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶ. ಇಲ್ಲಿ ಆಗಾಗ್ಗೆ ಭೂಕುಸಿತವಾಗುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದರು.

‘ಉತ್ತರ ಕನ್ನಡದಲ್ಲಿ ಉಂಟಾದ ನೆರೆಹಾನಿಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿದರೆ ಸಾಲದು. ಪರಿಹಾರ ನೀಡಲು ವಿಶೇಷ ಅನುದಾನ ಒದಗಿಸಲಿದ್ದು, ಈ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಲಾಗುವುದು' ಎಂದರು.

ADVERTISEMENT

‘ಸಂತ್ರಸ್ತರಿಗೆ ಅಗತ್ಯ ಪರಿಹಾರ ಒದಗಿಸಲು ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ. ಹಾನಿಯ ಸಮಗ್ರ ಮಾಹಿತಿ ಪಡೆದ ಬಳಿಕ ಕೇಂದ್ರಕ್ಕೆ ಹೆಚ್ಚಿನ ನೆರವು ಕೇಳುವ ಬಗ್ಗೆ ನಿರ್ಧರಿಸುತ್ತೇವೆ’ ಎಂದರು.

ಇದಕ್ಕೂ ಮೊದಲು ಅವರು, ಭೂಕುಸಿತದಿಂದ ಸಂಪೂರ್ಣವಾಗಿ ಮನೆ ಕುಸಿದಿದ್ದ ಪ್ರಕರಣಗಳಲ್ಲಿ ಹಲವು ಕುಟುಂಬಗಳಿಗೆ ಪರಿಹಾರ ವಿತರಿಸಿದರು. ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದಲ್ಲಿ ಗಂಗಾವಳಿ ನದಿಯ ಪ್ರವಾಹದಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿದ್ದ ಪ್ರದೇಶ, ಶಿರೂರಿನಲ್ಲಿ ಮನೆಗಳು ಮುಳುಗಡೆಯಾಗಿರುವ ಪ್ರದೇಶವನ್ನು ವೀಕ್ಷಿಸಿದರು.

ಶಾಸಕರಾದ ಶಿವರಾಮ ಹೆಬ್ಬಾರ, ಸುನೀಲ ನಾಯ್ಕ, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಆಡಳಿತ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಪ್ರಮೋದ ಹೆಗಡೆ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.