ವಿದ್ಯಾರ್ಥಿ ವೇತನ
ಬೆಂಗಳೂರು: ಶುಲ್ಕ ವಿನಾಯಿತಿ ಪಡೆದ ವಿದ್ಯಾರ್ಥಿಗಳ ಬೋಧನಾ ಶುಲ್ಕವನ್ನು ಅವರಿಗೆ ಮಂಜೂರಾದ ವಿದ್ಯಾರ್ಥಿವೇತನದಿಂದ ಮರು ಪಾವತಿ ಮಾಡಿಕೊಳ್ಳದ ಎರಡು ಎಂಜಿನಿಯರಿಂಗ್ ಹಾಗೂ 60 ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರಿಗೆ ತಾಂತ್ರಿಕ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.
2020-21, 2021-22 ಮತ್ತು 2022-23ನೇ ಸಾಲಿನ ಎಂಜನಿಯರಿಂಗ್, ಡಿಪ್ಲೊಮಾ ವಿದ್ಯಾರ್ಥಿಗಳು ಪಡೆದಿದ್ದ ಶುಲ್ಕ ವಿನಾಯಿತಿಯ ಮೊತ್ತ ₹3.96 ಕೋಟಿಯನ್ನು ಮರಳಿ ಪಡೆಯದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ಭಾರತೀಯ ಮಹಾಲೇಖಪಾಲರ ವರದಿ ಆಕ್ಷೇಪ ಮಾಡಿತ್ತು. ಆಕ್ಷೇಪದ ನಂತರ ತಾಂತ್ರಿಕ ಶಿಕ್ಷಣ ಇಲಾಖೆ ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಶುಲ್ಕ ವಿನಾಯಿತಿ ಪಡೆದ ಹಲವು ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನೂ ಪಡೆದಿದ್ದಾರೆ. ಸರ್ಕಾರ ಆಯಾ ಕಾಲೇಜುಗಳ ಪ್ರಾಂಶುಪಾಲರ ಖಾತೆಗೆ ಹಣವನ್ನು ನೇರವಾಗಿ ಜಮೆ ಮಾಡಿದ್ದರೂ, ವಿದ್ಯಾರ್ಥಿಗಳಿಂದ ಬರಬೇಕಿದ್ದ ಶುಲ್ಕದ ಮೊತ್ತವನ್ನು ಕಟಾವು ಮಾಡಿಕೊಂಡು ನಂತರ ಉಳಿಕೆ ಹಣವನ್ನು ಅವರ ಖಾತೆಗೆ ಜಮೆ ಮಾಡಬೇಕಿತ್ತು. ಆದರೆ, ಪೂರ್ಣ ಹಣವನ್ನು ಜಮೆ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ. ಅವರೆಲ್ಲ ಈಗಾಗಲೇ ಪದವಿ ಮುಗಿಸಿ ತೆರಳಿದ್ದು, ಹಣ ಮರುಪಾವತಿ ಅಸಾಧ್ಯ. ಈ ನಷ್ಟಕ್ಕೆ ಪ್ರಾಂಶುಪಾಲರೇ ಹೊಣೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.