ADVERTISEMENT

2 ವಾರ ಜಾಲಾಡಿ, ಬರಿಗೈಲಿ ಮರಳಿದ ಎಟಿಎಸ್!

ತೀರ್ಥಹಳ್ಳಿ ಸಮೀಪ ಶಂಕಿತ ಭಯೋತ್ಪಾದಕರು ತಂಗಿರುವ ಶಂಕೆ

ಚಂದ್ರಹಾಸ ಹಿರೇಮಳಲಿ
Published 16 ಅಕ್ಟೋಬರ್ 2019, 19:45 IST
Last Updated 16 ಅಕ್ಟೋಬರ್ 2019, 19:45 IST
   

ಶಿವಮೊಗ್ಗ:ತೀರ್ಥಹಳ್ಳಿ ತಾಲ್ಲೂಕು ಸಂಕದ ಹೊಳೆ, ಸುರಾನಿ ಬಳಿ ಶಂಕಿತ ಭಯೋತ್ಪಾದಕರು ತಂಗಿರುವ ಅನುಮಾನದಮೇಲೆ ಎರಡು ವಾರ ತೀವ್ರ ತಪಾಸಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬರಿಗೈಲಿ ಮರಳಿದೆ.

ಭಾರತದಲ್ಲಿ ನಿಷೇಧಿಸಿರುವ ಸ್ಯಾಟ್‌ಲೈಟ್‌ ಫೋನ್ ಅನ್ನು ಸಂಕದ ಹೊಳೆ, ಸುರಾನಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಳಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌.ಐ.ಎ) ನೀಡಿದ ಮಾಹಿತಿ ಆಧಾರದಲ್ಲಿ ಎ.ಟಿ.ಎಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಸ್ಥಳೀಯ ಪೊಲೀಸರ ನೆರವು ಪಡೆದು ತಪಾಸಣೆ ನಡೆಸಿದ್ದಾರೆ.

ಸ್ಯಾಟ್‌ಲೈಟ್‌ ಫೋನ್‌ ಬಳಸಿದ್ದಾರೆ ಎನ್ನಲಾದ ಸ್ಥಳದಲ್ಲಿ ಸುರಾನಿಯ ಶಫೀ, ಜಬ್ಬಾರ್ ಅವರಿಗೆ ಸೇರಿದ ಮನೆ, ಜಮೀನುಗಳಿವೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ತೋಟದಲ್ಲಿ ಕೆಲಸ ಮಾಡುವ ಕೇಶವ, ಸುತ್ತಮುತ್ತಲ ಗ್ರಾಮಸ್ಥರಿಂದಲೂ ಮಾಹಿತಿ ಕಲೆಹಾಕಿದ್ದಾರೆ. ಎರಡು ವಾರ ನಿರಂತರ ಜಾಲಾಡಿದರೂ ಶಂಕಿತ ಭಯೋತ್ಪಾದಕರು ಇರುವ ಕುರಿತು ಸಣ್ಣ ಸುಳಿವೂ ಸಿಕ್ಕಿಲ್ಲ.

ADVERTISEMENT

‘ಸ್ಯಾಟ್‌ಲೈಟ್‌ ಫೋನ್ ಬಳಸಿರುವ ಮಾಹಿತಿ ಆಧಾರದಲ್ಲಿ ತಪಾಸಣೆ ನಡೆಸಲಾಯಿತು. ಹಿಂದೆ ಲಷ್ಕರ್–ಎ–ತಯ್ಯಬಾ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಕೆ.ಪಿ. ಶಬ್ಬೀರ್, ಮತ್ತೊಬ್ಬ ಭಯೋತ್ಪಾದಕ ಯಾಸೀನ್ ಭಟ್ಕಳ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದ ಕಾರಣ ರಾಷ್ಟ್ರೀಯ ತನಿಖಾ ದಳ ನೀಡಿದ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಲಾಯಿತು. ಆ ಪ್ರದೇಶದಲ್ಲಿ ತೀರ್ಥಹಳ್ಳಿ–ಸಾಗರ ಮಾರ್ಗವೂ ಇದೆ. ಹೀಗಾಗಿ ಪ್ರಯಾಣಿಸಿರುವ ವ್ಯಕ್ತಿಯೂ ಸ್ಯಾಟ್‌ಲೈಟ್‌ ಫೋನ್ ಬಳಸಿರಬಹುದು. ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲದ ಕಾರಣ ತಪಾಸಣೆ ಸ್ಥಗಿತಗೊಳಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ವಿವರ ನೀಡಿದರು.

ಕಾಶ್ಮೀರ ವಿದ್ಯಾರ್ಥಿಗಳ ಮೇಲೂ ನಿಗಾ:ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ನಂತರ ರಾಜ್ಯದಲ್ಲಿ ವಾಸವಿರುವ ಕಾಶ್ಮೀರದ ವಿದ್ಯಾರ್ಥಿಗಳ ಮೇಲೂ ಕೇಂದ್ರ ಗುಪ್ತಚರ ಸಂಸ್ಥೆಗಳು ತೀವ್ರ ನಿಗಾ ಇರಿಸಿದ್ದ ಅಂಶವೂ ತಿಳಿದು ಬಂದಿದೆ.

ರಾಜ್ಯದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಸೇರಿ ವಿವಿಧ ಕೋರ್ಸ್‌ಗಳಿಗೆ ಕಾಶ್ಮೀರದ ಹಲವು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಅವರ ಸಂಪೂರ್ಣ ಮಾಹಿತಿ ಕಲೆಹಾಕಿ, ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿತ್ತು.

‘ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಇಲ್ಲಿನ ವಿದ್ಯಾರ್ಥಿಗಳು ಪೋಷಕರ ಜತೆ ಸಂಪರ್ಕ ಕಳೆದುಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಅವರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯಬಹುದು ಎಂಬ ಕಾರಣಕ್ಕೆ ನಿಗಾ ಇರಿಸಲು ಸೂಚನೆ ಬಂದಿತ್ತು’ ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನಿದು ಸ್ಯಾಟ್‌ಲೈಟ್‌ ಫೋನ್?

ಸೆಲ್‌ಫೋನ್ ಬಳಸಲು ಟವರ್ ಸಿಗ್ನಲ್‌ ಅಗತ್ಯ. ಆದರೆ, ಸ್ಯಾಟ್‌ಲೈಟ್‌ ಫೋನ್‌ಗಳನ್ನು ಎಲ್ಲ ಪ್ರದೇಶಗಳಲ್ಲೂ ಬಳಸಬಹುದು. ಹೀಗಾಗಿ ಅವುಗಳನ್ನು ಸೈನಿಕರು, ಪರ್ವಾತಾರೋಹಿಗಳು ಹೆಚ್ಚಾಗಿ ಬಳಸುತ್ತಾರೆ. ನಮ್ಮ ದೇಶದಲ್ಲಿ ಜನರು ಇಂತಹ ಫೋನ್‌ಗಳ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಅಗತ್ಯವಿದ್ದವರು ಅನುಮತಿ ಪಡೆಯಬೇಕು. ಭಯೋತ್ಪಾದಕರು ಇಂತಹ ಫೋನ್ ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಅನಧಿಕೃತವಾಗಿ ಯಾರಾದರೂ ಫೋನ್‌ ಬಳಸಿದ ಮಾಹಿತಿ ಸಿಕ್ಕರೆ ಆ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.