ADVERTISEMENT

ಜೀವಪಣಕ್ಕಿಟ್ಟು ಮಾರು ವೇಷದಲ್ಲಿ ದಾಳಿ ನಡೆಸಿದ ತಹಶೀಲ್ದಾರ್,ಸಾರ್ವಜನಿಕರ ಮೆಚ್ಚುಗೆ

ಜೀವ ಪಣಕ್ಕಿಟ್ಟು ನಡೆಸಿದ ದಾಳಿಗೆ ಸಾರ್ವಜನಿಕರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 13:08 IST
Last Updated 2 ಮೇ 2019, 13:08 IST
ಶಿವಮೊಗ್ಗ ತಾಲ್ಲೂಕಿನ ಗೆಜ್ಜೇನಹಳ್ಳಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಮಾರು ವೇಷದಲ್ಲಿ ಭೇಟಿ ನೀಡಿ ಪರಿಶೀಲಿಸುತ್ತಿರುವ ತಹಶೀಲ್ದಾರ್ ಗಿರೀಶ್.
ಶಿವಮೊಗ್ಗ ತಾಲ್ಲೂಕಿನ ಗೆಜ್ಜೇನಹಳ್ಳಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಮಾರು ವೇಷದಲ್ಲಿ ಭೇಟಿ ನೀಡಿ ಪರಿಶೀಲಿಸುತ್ತಿರುವ ತಹಶೀಲ್ದಾರ್ ಗಿರೀಶ್.   

ಶಿವಮೊಗ್ಗ: ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆಶಿವಮೊಗ್ಗ ತಹಶೀಲ್ದಾರ್ ಬುಧವಾರ ಮಾರುವೇಷದಲ್ಲಿ ತೆರಳಿ, ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿದರು.

ತಾಲ್ಲೂಕಿನ ಗೆಜ್ಜೇನಹಳ್ಳಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಬಿ.ಎನ್. ಗಿರೀಶ್ ಮತ್ತವರ ತಂಡ ದಾಳಿ ನಡೆಸಿದೆ. ಈ ಸಂದರ್ಭ ದಂಧೆಕೋರರಿಗೆ ಅನುಮಾನ ಬಾರದಂತೆ ತಹಶೀಲ್ದಾರ್ಟಿ–ಶರ್ಟ್‌ ಧರಿಸಿ, ತಲೆಗೆ ಟವಲ್‌ ಸುತ್ತಿಕೊಂಡು, ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ತೆರಳಿ ದಾಳಿ ನಡೆಸಿದರು. ಎರಡು ಟ್ರಾಕ್ಟರ್, ಒಂದು ಜೆಸಿಬಿಯನ್ನು ವಶಕ್ಕೆ ಪಡೆದುಕೊಂಡರು.

ಗೆಜ್ಜೇನಹಳ್ಳಿ ಸುತ್ತಮುತ್ತ ಹಲವು ದಿನಗಳಿಂದ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಈ ಭಾಗದ ಜನರು ರೋಸಿ ಹೋಗಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಜೀವಭಯ ಎದುರಾಗುತ್ತಿತ್ತು. ಇದರಿಂದ ಭಯದವಾತಾವರಣದಲ್ಲಿಯೇ ಜನರು ವಾಸಿಸುತ್ತಿದ್ದರು. ಕೆಲವೊಮ್ಮೆ ಅಧಿಕಾರಿಗಳ ಬಳಿ ಬಂದು ಅಕ್ರಮ ಗಣಿಗಾರಿಕೆಯಿಂದ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ತಾವು ಮಾಹಿತಿ ನೀಡಿರುವ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು.

ADVERTISEMENT

ಕೇವಲ 3 ತಿಂಗಳ ಹಿಂದೆ ಶಿವಮೊಗ್ಗ ತಹಶೀಲ್ದಾರ್‌ ಆಗಿ ನೇಮಕಗೊಂಡ ಗಿರೀಶ್ಚುನಾವಣೆಗೂ ಮುನ್ನ ಸ್ಥಳಕ್ಕೆ ಭೇಟಿ ನೀಡಿ, ಅಕ್ರಮ ಗಣಿಗಾರಿಕೆ ಬಂದ್ ಮಾಡಿಸಿ, ದಂಡ ವಿಧಿಸಿದ್ದರು. ಆದರೂ ದಂಧೆಕೋರರು ಅಕ್ರಮ ಗಣಿಗಾರಿಕೆಯನ್ನು ಮುಂದುವರೆಸಿದ್ದರು. ಪುನಃ ಪರಿಶೀಲಿಸಲು ತೆರಳುತ್ತಿದ್ದಾಗ ತಮ್ಮ ಹಿಂಬಾಲಕರಿಂದ ತಹಶೀಲ್ದಾರ್ ಬರುವ ಮಾಹಿತಿ ಪಡೆದು ಗಣಿಗಾರಿಕೆ ನಡೆಸುತ್ತಿದ್ದವರು ಪರಾರಿ ಆಗುತ್ತಿದ್ದರು. ಯಾವುದೇ ಗಣಿಗಾರಿಕೆ ನಡೆಸುತ್ತಿಲ್ಲ ಎನ್ನುವಂತೆ ನಾಟಕವಾಡುತ್ತಿದ್ದರು.

ಮಾಹಿತಿ ನೀಡುತ್ತಿದ್ದ ಬೆಂಬಲಿಗರು: ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ದಂಧೆಕೋರರು ಗಣಿಗಾರಿಕೆನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಮ್ಮ ಬೆಂಬಲಿಗರನ್ನು ನೇಮಿಸಿದ್ದರು. ಇವರು ರಸ್ತೆಯಲ್ಲಿ ಯಾರಾದರೂ ಅಧಿಕಾರಿಗಳು, ಸರ್ಕಾರಿ ವಾಹನಗಳು ಬರುತ್ತಿದ್ದಂತೆ ಮಾಹಿತಿ ರವಾನಿಸುತ್ತಿದ್ದರು. ಇದರಿಂದ ಈ ಹಿಂದೆ ನಡೆದ ಹಲವು ದಾಳಿಗಳುವಿಫಲವಾಗಿದ್ದವು.

ಈ ನಡುವೆಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿಸಲು ತಹಶೀಲ್ದಾರ್ ಕಾರ್ಯತಂತ್ರ ರೂಪಿಸಿದರು. ಮಾಹಿತಿ ನೀಡುವವರಿಗೆ ಚಳ್ಳೆಹಣ್ಣು ತಿನ್ನಿಸಲು ಮಾರುವೇಷ ಧರಿಸಿದರು.

ಹಲವು ವರ್ಷಗಳಿಂದ ಗೆಜ್ಜೇನಹಳ್ಳಿ ಭಾಗದಲ್ಲಿ ಏಳೆಂಟು ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ. ಆದರೆ, ಪ್ರಶ್ನಿಸಲು ಹೋದವರ ಮೇಲೆಯೇ ವಾಹನ ಹತ್ತಿಸುವುದಾಗಿ ದಂಧೆಕೋರರು ಹೆದರಿಸುತ್ತಿದ್ದರು.

***

ಈ ಕಾರ್ಯಕ್ಕೆ ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರಭು, ಮಹಾರುದ್ರ, ಹಾಲೇಶ್ ಕೈ ಜೋಡಿಸಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಪೊಲೀಸರು ನಿಗಾ ಇಡುವಂತೆ ಸೂಚಿಸಲಾಗಿದೆ.
- ಗಿರೀಶ್, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.