ADVERTISEMENT

ಬಡತನ ನಿರ್ಮೂಲನೆಯೂ ಹಿಂದುತ್ವ: ತೇಜಸ್ವಿ ಸೂರ್ಯ

ಉದ್ಯೋಗ ಸೃಷ್ಟಿಯಾಗಿದ್ದರಿಂದಲೇ ರಾಹುಲ್ ರ‍್ಯಾಲಿಗೆ ಜನ ಇಲ್ಲ

ಮಂಜುನಾಥ್ ಹೆಬ್ಬಾರ್‌
Published 30 ಏಪ್ರಿಲ್ 2019, 13:53 IST
Last Updated 30 ಏಪ್ರಿಲ್ 2019, 13:53 IST
   

*ಬೆಂಗಳೂರು ದಕ್ಷಿಣ ಬಿಜೆಪಿಗೆ ಸುರಕ್ಷಿತ ಕ್ಷೇತ್ರ. ಹೀಗಾಗಿ, ಇಲ್ಲಿ ಹೊಸಬರಿಗೆ ಅವಕಾಶ ನೀಡಿದ್ದೇವೆ ಎಂದು ನಿಮ್ಮ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ. ಬೇರೆ ಕಡೆ ಯುವಕರನ್ನು ಕಣಕ್ಕೆ ಇಳಿಸಲು ಬಿಜೆಪಿಗೆ ಧೈರ್ಯ ಇಲ್ಲವೇ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು– ಕೊಡಗು ಕ್ಷೇತ್ರದಲ್ಲಿ ಪ್ರತಾಪಸಿಂಹ ಅವರಿಗೆ ನಮ್ಮ ನಾಯಕರು ಅವಕಾಶ ಮಾಡಿಕೊಟ್ಟರು. ಮೈಸೂರು ನಮ್ಮ ಪಾಲಿಗೆ ಸುರಕ್ಷಿತ ಕ್ಷೇತ್ರವೇನೂ ಅಲ್ಲ. ಅಲ್ಲಿ ಪ್ರತಾಪಸಿಂಹ ಗೆದ್ದು ಬಂದರು. ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಪ್ರೀತಂ ಗೌಡರನ್ನು ಕಣಕ್ಕೆ ಇಳಿಸಿದರು. ಅವರು ಅಲ್ಲಿ ಗೆದ್ದರು. ಗಾಂಧಿನಗರ ಕ್ಷೇತ್ರದಲ್ಲಿ ಸಪ್ತಗಿರಿ ಗೌಡರಿಗೆ ಅವಕಾಶ ನೀಡಿದರು. ಅವರು ಕೆಲವೇ ಸಾವಿರ ಮತಗಳ ಅಂತರದಿಂದ ಸೋತರು. ಕಷ್ಟದ ಸೀಟು ಕೊಟ್ಟರೆ ಯುವಕರಿಗೆ ಬರೀ ಕಷ್ಟದ ಸೀಟು ನೀಡುತ್ತಾರೆ, ಒಳ್ಳೆಯ ಸೀಟು ಕೊಟ್ಟರೆ ಸುರಕ್ಷಿತ ಕ್ಷೇತ್ರ ಕೊಟ್ಟಿದ್ದಾರೆ ಎಂದು ಟೀಕೆ ಮಾಡುವುದು ಸರಿಯಲ್ಲ. ಯುವಕರು ರಾಜಕೀಯಕ್ಕೆ ಬರುತ್ತಿರುವುದನ್ನು ಸ್ವಾಗತ ಮಾಡಬೇಕೇ ಹೊರತು ಟೀಕೆ ಮಾಡಬಾರದು.

*ಯುವಕರ ಹೆಸರಿನಲ್ಲಿ ಬಿ.ಎಸ್.ಯಡಿಯೂರಪ್ಪ ಪುತ್ರ, ಸಿ.ಎಂ. ಉದಾಸಿ ಪುತ್ರರಿಗೆ ಟಿಕೆಟ್‌ ಕೊಡಲಾಗಿದೆ. ಬೇರೆ ಯುವಕರು ಇಲ್ಲವೇ?

ADVERTISEMENT

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಸೀಟುಗಳಲ್ಲಿ ನಮ್ಮ ಪಕ್ಷದಿಂದ ಯುವಕರು ಗೆದ್ದು ಬಂದರು. ಅವರ ಅಪ್ಪಂದಿರು ಸಂಸದರು, ಶಾಸಕರು ಅಲ್ಲವಲ್ಲ. ಅನಂತ ಕುಮಾರ್ ಅವರಂತಹ ದೊಡ್ಡ ನಾಯಕರು ಇದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನನಗೆ ಟಿಕೆಟ್‌ ನೀಡಿದ್ದಾರೆ. ನನ್ನ ಅಪ್ಪ ಎಂ.ಪಿ, ಎಂಎಲ್‌ಎ ಅಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಒಂದಿಷ್ಟು ಕಡೆಗಳಲ್ಲಿ ಪಕ್ಷದ ನಾಯಕರ ಮಕ್ಕಳಿಗೆ ಟಿಕೆಟ್‌ ನೀಡಿರಬಹುದು. ಸಾಮಾನ್ಯ ಜನರಿಗೆ ಉನ್ನತ ಸ್ಥಾನಕ್ಕೆ ಏರಲು ಅವಕಾಶ ಸಿಗುವುದು ನಮ್ಮ ಪಕ್ಷದಲ್ಲಿ ಮಾತ್ರ.

*ಯಾವುದೇ ರಾಜಕೀಯ ತಾಲೀಮು ನಡೆಸುವ ಹಾಗೂ ಆಡಳಿತ ಕಾರ್ಯವೈಖರಿಯ ಬಗ್ಗೆ ತಿಳಿಯುವ ಮುನ್ನವೇ ನಿಮಗೆ ಟಿಕೆಟ್‌ ಸಿಕ್ಕಿದೆ. ಈ ಸವಾಲನ್ನು ಹೇಗೆ ನಿಭಾಯಿಸುತ್ತೀರಿ?

ಸಚಿನ್‌ ತೆಂಡೂಲ್ಕರ್‌ ಸಹ ಎಲ್ಲ ಸಿದ್ಧತೆ ಮಾಡಿಕೊಂಡು ಕ್ರಿಕೆಟ್‌ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ ತಾನೇ. ಯಾರೂ ಹುಟ್ಟಿನಿಂದಲೇ ಅನುಭವಸ್ಥರಾಗಿರುವುದಿಲ್ಲ. ಕೆಲಸ ಮಾಡುತ್ತಾ ಹೋದಂತೆ ಅನುಭವ ಬರುತ್ತದೆ. ಬೆಂಗಳೂರಿನಲ್ಲಿ ಐದಾರು ಸಲ ಗೆದ್ದಿರುವ ಆರ್.ಅಶೋಕ್‌, ವಿ.ಸೋಮಣ್ಣ, ಸತೀಶ್‌ ರೆಡ್ಡಿ ಸೇರಿದಂತೆ ಪಕ್ಷದ ಶಾಸಕರ ಮಾರ್ಗದರ್ಶನ ನನಗಿದೆ. ಹೀಗಾಗಿ, ಹೆಚ್ಚು ತಲೆಕೆಡಿಸಿಕೊಂಡಿಲ್ಲ.

*ನೀವು ಹಿಂದಿ ಹೇರಿಕೆ ಪರ ಇದ್ದೀರಿ ಎಂದು ಟ್ವಿಟರ್‌ನಲ್ಲಿ ಕೆಲವರು ನಿಮ್ಮ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದಾರಲ್ಲ?

ಇದೊಂದು ಸುಳ್ಳು ಅಭಿಯಾನ. ಕನ್ನಡದ ಧ್ವನಿಯಾಗುವ ಅವಕಾಶ ಕೊಡಿ ಎಂದು ಎಲ್ಲ ಕಡೆಗಳಲ್ಲಿ ಕೇಳಿಕೊಳ್ಳುತ್ತಿದ್ದೇನೆ. ನಾನು ಕನ್ನಡ ಪತ್ರಿಕೆಗಳಿಗೆ ನೂರು ಅಂಕಣಗಳನ್ನು ಬರೆದಿದ್ದೇನೆ. ಕನ್ನಡದ ಭಾಷಾಶುದ್ಧಿ ಚೆನ್ನಾಗಿರಬೇಕು ಎಂಬ ಬಗ್ಗೆ ಪ್ರತಿದಿನ ಪ್ರಯತ್ನ ಮಾಡುತ್ತಿದ್ದೇನೆ.

*ಯುವಜನರು ನಿರುದ್ಯೋಗದಿಂದ ತತ್ತರಿಸಿದ್ದಾರೆ. ಎಂಜಿನಿಯರಿಂಗ್ ಪದವೀಧರರು ವರ್ಷಗಟ್ಟಲೆ ಕಾದರೂ ಉದ್ಯೋಗ ಸಿಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ತಪ್ಪು ನೀತಿಗಳೇ ಕಾರಣ ಎಂಬ ಆರೋಪಗಳಿವೆಯಲ್ಲಾ?

ದೊಡ್ಡ ದೇಶದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಿಜ. ಆದರೆ, ನರೇಂದ್ರ ಮೋದಿ ಸರ್ಕಾರದಲ್ಲಿ ಸೃಷ್ಟಿಯಾದಷ್ಟು ಉದ್ಯೋಗ ಹಿಂದೆ ಯಾವ ಸರ್ಕಾರದಲ್ಲೂ ಸೃಷ್ಟಿ ಆಗಿರಲಿಲ್ಲ. ದೊಡ್ಡ ಪ್ರಮಾಣದ ನಿರುದ್ಯೋಗ ಇದ್ದರೆ ಜನರು ಬೀದಿಗಿಳಿದು ಹೋರಾಟ ಮಾಡಬೇಕಿತ್ತು ಅಲ್ಲವೇ. ಅಷ್ಟೊಂದು ನಿರುದ್ಯೋಗ ಇದ್ದರೆ ರಾಹುಲ್‌ ಗಾಂಧಿ ರ‍್ಯಾಲಿಗಳು ತುಂಬಿ ತುಳುಕಾಡಬೇಕಿತ್ತು. ಉದ್ಯೋಗ ಹಾಗೂ ನೆಮ್ಮದಿ ಸಿಕ್ಕಿದ್ದರಿಂದಲೇ ರಾಹುಲ್‌ ಗಾಂಧಿ ರ‍್ಯಾಲಿಗಳಿಗೆ ಜನರು ಹೋಗುತ್ತಿಲ್ಲ.

*ಬಿಜೆಪಿ ನಾಯಕರು ಅಭಿವೃದ್ಧಿ ಕುರಿತು ಮಾತನಾಡುವುದನ್ನು ಬಿಟ್ಟು ಹಿಂದುತ್ವ ಹಾಗೂ ರಾಷ್ಟ್ರೀಯತೆ ಹೆಸರಿನಲ್ಲಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಇದೆಯಲ್ಲ?

ಭಾರತವನ್ನು ಶ್ರೀಮಂತ ರಾಷ್ಟ್ರವನ್ನಾಗಿ ಮಾಡುವುದು, ಬಡತನ ನಿರ್ಮೂಲನೆ, ಪ್ರತಿಯೊಬ್ಬ ಬಡವನಿಗೂ ಉತ್ತಮ ಜೀವನಶೈಲಿ ರೂಪಿಸುವುದು ಸಹ ಹಿಂದುತ್ವದ ಭಾಗ.

*ಅನಂತಕುಮಾರ್ ಅವರು ನನ್ನ ಗುರುಗಳು ಎಂದು ಪದೇ ಪದೇ ಹೇಳಿದ್ದೀರಿ. ತೇಜಸ್ವಿನಿಅವರಿಗೆ ಸಿಗಬೇಕಾದ ಟಿಕೆಟ್‌ ಅನ್ನು ಪಡೆಯುವ ಮೂಲಕ ಗುರುಪತ್ನಿಗೆ ದ್ರೋಹ ಮಾಡಿದಂತಾಗಿಲ್ಲವೇ?

ತೇಜಸ್ವಿನಿ ಅವರು ತಾಯಿ ರೂಪದಲ್ಲಿದ್ದು ನನ್ನನ್ನು ಬೆಳೆಸಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಯಾದ ದಿನದಿಂದಲೂ ನನಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಭಾಷಣಕ್ಕೆ ಅವಕಾಶ ಮಾಡಿಕೊಟ್ಟು ಬೆಳೆಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಮುನ್ನ ಅವರ ಆಶೀರ್ವಾದ ಪಡೆದಿದ್ದೇನೆ. ಅವರ ಸಂಪೂರ್ಣ ಆಶೀರ್ವಾದ ನನ್ನ ಮೇಲಿದೆ.

ನ್ಯಾಷನಲ್‌ ಸ್ಕೂಲ್ ಆಫ್ ಲಾ ದಲ್ಲಿ ಕಲಿತದ್ದಲ್ಲ

‘ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಲೀಗಲ್‌ ಸ್ಟಡೀಸ್‌ನಲ್ಲಿ ಕಾನೂನು ಪದವಿ ಪಡೆದಿದ್ದೇನೆ’ ಎಂದು ತೇಜಸ್ವಿ ಹೇಳಿದರು.

ನೀವು ನ್ಯಾಷನಲ್ ಸ್ಕೂಲ್‌ ಆಫ್ ಲಾ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದಿದ್ದು ಹೌದೇ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ಅವರನ್ನು ಅಭ್ಯರ್ಥಿಯೆಂದು ಘೋಷಿಸಿದ ದಿನ ಬಿಜೆಪಿ ಬಿಡುಗಡೆ ಮಾಡಿದ್ದ ಅವರ ಪ್ರೊಫೈಲ್‌ನಲ್ಲಿ ನ್ಯಾಷನಲ್ ಸ್ಕೂಲ್ ಆಫಾ ಲಾದಲ್ಲಿ ಕಾನೂನು ಅಭ್ಯಾಸ ಮಾಡಿದ್ದಾರೆ ಎಂಬ ವಿವರ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.