ADVERTISEMENT

ದೂರವಾಣಿ ಕದ್ದಾಲಿಕೆ ಪ್ರಕರಣ: ನಂಬಿಕೆಗೆ ಪೆಟ್ಟು, ತಲೆದಂಡಕ್ಕೆ ಪಟ್ಟು

ತನಿಖೆ ನಡೆಸಲು ಸಿದ್ದರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 4:39 IST
Last Updated 18 ಆಗಸ್ಟ್ 2019, 4:39 IST
   

ಬೆಂಗಳೂರು: ಫೋನ್‌ ಕದ್ದಾಲಿಕೆ ಪ್ರಕರಣ ಕಾಂಗ್ರೆಸ್–ಜೆಡಿಎಸ್ ಮುಖಂಡರ ನಡುವೆ ಅಪನಂಬಿಕೆಗೆ ಕಾರಣವಾಗಿ
ದ್ದರೆ,ಐಪಿಎಸ್ ಅಧಿಕಾರಿಗಳ ವಲಯದಲ್ಲಿ ಯಾರ ತಲೆದಂಡ ಆಗಲಿದೆ ಎಂಬ ಚರ್ಚೆ ಆರಂಭವಾಗಿದೆ.

ಫೋನ್ ಕದ್ದಾಲಿಸಲು ‘ವ್ಯವಸ್ಥೆ’ ಮಾಡಿದ ಅಧಿಕಾರಿಯ ತಲೆದಂಡ ಆಗಲೇಬೇಕು. ಇದಕ್ಕೆ ಸೂಚನೆ ನೀಡಿದ ರಾಜಕಾರಣಿಯ ಹೆಸರು ಹೊರ ಬರಬೇಕು ಎಂದು ಬಿಜೆಪಿ ಮುಖಂಡರು ಪಟ್ಟುಹಿಡಿದಿದ್ದು, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿದ್ದಾರೆ.

ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದಂತೆಯೇ ಆ ಪಕ್ಷದ ಮುಖಂಡರು ಆಕ್ರೋಶಗೊಂಡಿದ್ದಾರೆ. ಪಕ್ಷದ ವೇದಿಕೆ ಹಾಗೂ ಆಂತರಿಕವಾಗಿ ಅಸಮಾಧಾನ ಹೊರ ಹಾಕಿದ್ದು, ಸರ್ಕಾರ ರಚಿಸಲು ಬೆಂಬಲ ನೀಡಿದ್ದ ತಮ್ಮಗಳ ಫೋನ್‌ ಕದ್ದಾಲಿಸುವ ಮೂಲಕ ನಂಬಿಕೆ ದ್ರೋಹ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರೂ ನಮ್ಮನ್ನೇ ನಂಬಲಿಲ್ಲ. ಖಾಸಗಿ ವಿಚಾರಗಳನ್ನೂ ಕೇಳಿಸಿಕೊಂಡಿದ್ದಾರೆಎಂದು ಆರೋಪಿಸಿದ್ದಾರೆ.

ADVERTISEMENT

ತನಿಖೆ ನಡೆಸಲಿ: ‘ಒಂದು ವೇಳೆ ಫೋನ್‌ ಕದ್ದಾಲಿಕೆಯಾಗಿದ್ದರೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗೌಡರ ಸಮರ್ಥನೆ:ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಫೋನ್ ಕದ್ದಾಲಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

‘ಫೋನ್ ಕದ್ದಾಲಿಕೆ ಆರೋಪ ಮಾಡಿರುವ ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಇದೆಯೇ? ಕದ್ದಾಲಿಕೆ ಮಾಡುವುದು ಇರಲಿ, ಶಾಸಕರನ್ನು ಹೊತ್ತುಕೊಂಡು ಹೋದವರು ಯಾರು? ಬಿಜೆಪಿ ನಾಯಕರು ಏನು ಮಾಡುತ್ತಾರೋ ನೋಡೋಣ, ಯಾರ ಕಾಲ
ದಲ್ಲಿ ಏನೆಲ್ಲ ನಡೆದಿದೆ ಎಂಬುದು ಗೊತ್ತಿದೆ. ಸಮಯ ಬರಲಿ, ಎಲ್ಲವನ್ನೂ ಹೇಳುತ್ತೇನೆ‘ ಎಂದು ಗುಡುಗಿದ್ದಾರೆ.

‘ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ನನ್ನ ಹೆಸರು ಏಕೆ ತಳಕು ಹಾಕಿಕೊಂಡಿದೆ ಎನ್ನುವುದು ನನಗೆ ಗೊತ್ತಿಲ್ಲ. ಈಗ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಬೇಕಾದರೆ ತನಿಖೆ ನಡೆಸಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಕಳೆದ ಒಂದು ವರ್ಷದಲ್ಲಿ ಯಾರು ಹೇಗೆ ನಡೆದುಕೊಂಡಿದ್ದಾರೆ, ಏನೆಲ್ಲ ಮಾಡಿದ್ದಾರೆ ಎಂಬುದು ಗೊತ್ತಿದೆ. ಎಚ್.ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ತನಿಖೆಗೆ ಹಿಂದೇಟು

ಮೈತ್ರಿ ಸರ್ಕಾರದ ಅವಧಿಯಲ್ಲಿ ಫೋನ್ ಕದ್ದಾಲಿಕೆ ನಡೆದಿದೆ. ಈಗ ತನಿಖೆ ನಡೆಸಿ ಏನು ಮಾಡುವುದು. ಈ ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಯಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.