ADVERTISEMENT

ಗಮನಿಸಿದ್ದೀರಾ? ಕಳೆದೆರಡು ದಿನಗಳಿಂದ ವಾತಾವರಣ ತಂಪಾಗಿದೆ‌!

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 2:11 IST
Last Updated 9 ಏಪ್ರಿಲ್ 2019, 2:11 IST
   

ಬೆಂಗಳೂರು: ಯುಗಾದಿ ಹಬ್ಬಕ್ಕೂ ಮೊದಲು ಧಗಧಗಿಸುತ್ತಿದ್ದ ಬಿಸಿಲಿನಿಂದಾಗಿ ಹೆಚ್ಚಾಗಿದ್ದ ತಾಪಮಾನ ಕಳೆದೆರಡು ದಿನಗಳಿಂದ ಮಳೆಯಿಂದಾಗಿ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಹೀಗಾಗಿ ಸದ್ಯ ವಾತಾವರಣ ತಂಪಾಗಿದೆ.

ಕಳೆದ ಎರಡು ದಿನಗಳಿಂದಲೂ ಸಂಜೆ ಹೊತ್ತಿಗೆ ಆಕಾಶದಲ್ಲಿ ಮೋಡ ಕವಿಯುತ್ತಿದ್ದು, ಮಳೆಯಾಗುತ್ತಿದೆ. ಬಹುತೇಕ ರಾಜ್ಯದೆಲ್ಲೆಡೆ ಎರಡುದಿನಗಳಿಂದೀಚೆಗೆಇದೇ ರೀತಿಯ ಪರಿಸರವಿದ್ದು, ವಾತಾವರಣ ಆಹ್ಲಾದಕರ ಎನಿಸುತ್ತಿದೆ.

ಸೋಮವಾರವಂತೂ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಜೋರು ಎನಿಸುವಂಥ ಮಳೆಯೇ ಆಗಿದೆ. ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಸೇರಿದಂತೆ ಹಲವೆಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಯಿತು. ಹೀಗಾಗಿ ಬೇಸಿಗೆಯಲ್ಲಿ ತೀವ್ರ ತಪಮಾನ ಎದುರಿಸುವ ಕರಾವಳಿ ಜಿಲ್ಲೆಗಳು ಮತ್ತು ಸದಾ ಬೇಸಿಗೆಯಂಥ ಪರಿಸರ ಹೊಂದಿರುವ ಉತ್ತರ ಕರ್ನಾಟಕ ಭಾಗದಲ್ಲಿ ವಾತಾವರಣ ತಕ್ಕಮಟ್ಟಿಗೆ ತಂಪಾಗಿದೆ.

ADVERTISEMENT

ಎರಡು ದಿನಗಳಲ್ಲಿ ತಾಪಮಾನದಲ್ಲಿ ಸತತ ಕುಸಿತವಾಗುತ್ತಿರುವುದನ್ನು ಎಲ್ಲರ ಅನುಭವಕ್ಕೆ ಬಂದಿರಲಿಕ್ಕೂ ಸಾಕು.ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ದಾಖಲಾಗಿದ್ದ ಗರಿಷ್ಠ ತಾಪಮಾನ 36 ಡಿಗ್ರಿ. ಆದರೆ, ಭಾನುವಾರ ಅದು 35ಕ್ಕೂ, ಸೋಮಾರ 34 ಡಿಗ್ರಿಗೆ ಕುಸಿದಿದೆ. ಮಳೆ ಮುಂದುವರಿದಂತೆಲ್ಲ ತಾಪಮಾನವೂ ಕಡಿಮೆಯಾಗುವ ಸಾಧ್ಯತೆಗಳುಂಟು. ಇನ್ನು ಪರಿಸರದಲ್ಲಿ ಗಾಳಿವೇಗವೂ ಹೆಚ್ಚಾಗಿದ್ದು, ಆದ್ರತೆಯೂ ವೃದ್ಧಿಯಾಗುತ್ತಿದೆ.

ಇನ್ನೊಂದೆಡೆ, ಸಂಜೆಯಾಗುತ್ತಲೇ ಆಗಸದಲ್ಲಿ ಮೋಡ ಕವಿದು, ಇಡೀ ಪರಿಸರವೇ ಹೊಂಬಣ್ಣಕ್ಕೆ ತಿರುಗಿ ಮನಮೋಹಕ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಅದರೊಂದಿಗೆ ಧರೆಗೆ ಬೀಳುವ ಒಂದೆರಡು ಹನಿ ಮಳೆ ಹನಿ ಮಣ್ಣಿನ ಘಮಲು ಸೃಷ್ಟಿ ಮಾಡುತ್ತಿದೆ.

ಆದರೆ, ಇದೆಲ್ಲವೂ ತೀವ್ರ ತಾಪಮಾನದ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ತಾತ್ಕಾಲಿಕ ವಿದ್ಯಮಾನಗಳಷ್ಟೇ. ಬೇಸಿಗೆ ಇನ್ನೂ ಜೂನ್‌ ವರೆಗೆ ಇರಲಿದೆ. ಇನ್ನೂ ಒಂದೂವರೆ ತಿಂಗಳ ಕಾಲ ಬಿಸಿಲ ಬೇಗೆ, ಧಗೆ ಮಾತ್ರ ನಿರೀಕ್ಷಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.