ADVERTISEMENT

‘ರಾಜಕೀಯ ಮೇಲಾಟ’ಕ್ಕೆ ತಾತ್ಕಾಲಿಕ ತೆರೆ

ಕಾಂಗ್ರೆಸ್ ಶಾಸಕರ ರೆಸಾರ್ಟ್‌ ವಾಸ ಅಂತ್ಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 20:00 IST
Last Updated 21 ಜನವರಿ 2019, 20:00 IST
ಈಗಲ್‌ಟನ್ ರೆಸಾರ್ಟ್‌ನಿಂದ ಸೋಮವಾರ ಹೊರಬಂದ ಶಾಸಕರು
ಈಗಲ್‌ಟನ್ ರೆಸಾರ್ಟ್‌ನಿಂದ ಸೋಮವಾರ ಹೊರಬಂದ ಶಾಸಕರು   

ಬೆಂಗಳೂರು/ರಾಮನಗರ: ಮೈತ್ರಿ ಸರ್ಕಾರ ಪತನಗೊಳಿಸುವ ನಿಟ್ಟಿನಲ್ಲಿ ‘ಆಪರೇಷನ್‌ ಕಮಲ’ಕ್ಕೆ ಮುಂದಾದ ಬಿಜೆಪಿ ನಾಯಕರು ಮತ್ತು ಆ ಭೀತಿಗೆ ಬೆದರಿ ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್‌ ಶಾಸಕರ ‘ರಾಜಕೀಯ ಮೇಲಾಟ’ಕ್ಕೆ ಸಿದ್ಧಗಂಗಾ ಶ್ರೀಗಳ ನಿಧನದಿಂದಾಗಿ ತಾತ್ಕಾಲಿಕ ತೆರೆಬಿದ್ದಿದೆ.

ಅತೃಪ್ತ ‘ಕೈ’ ಶಾಸಕರನ್ನು ಸೆಳೆದು ಕಮಲ ಪಕ್ಷ ಮೇಲುಗೈ ಸಾಧಿಸಲು ಮುಂದಾಗಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ, ಎಚ್ಚೆತ್ತುಕೊಂಡ ಕಾಂಗ್ರೆಸ್‌, ಶುಕ್ರವಾರ (ಜ.18) ರಾತ್ರಿ ತನ್ನ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಿತ್ತು.

ಸೋಮವಾರ ಮಧ್ಯಾಹ್ನ ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ಶಾಸಕರು ರೆಸಾರ್ಟ್‌ನಿಂದ ಜಾಗ ಖಾಲಿ ಮಾಡಿ ತಮ್ಮ ಕ್ಷೇತ್ರಗಳಿಗೆ ತೆರಳಿದರು. ಶ್ರೀಗಳ ನಿಧನ ಕಾರಣ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆಯನ್ನೂ ರದ್ದುಪಡಿಸಲಾಯಿತು.

ADVERTISEMENT

ಮಧ್ಯಾಹ್ನ 12 ಗಂಟೆಗೆ ರೆಸಾರ್ಟ್‌ಗೆ ಬಂದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಲ್ಲ ಶಾಸಕರಿಗೆ ಶುಭ ಕೋರಿ, ಈಗಲ್‌ಟನ್ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಏರಿ ಬಾದಾಮಿಗೆ ಹೊರಟರು. ಅದಾದ ಕೆಲವೇ ನಿಮಿಷಕ್ಕೆ ಶಾಸಕರು ಒಬ್ಬೊಬ್ಬರಾಗಿ ಖಾಸಗಿ ಕಾರುಗಳಲ್ಲಿ ನಿರ್ಗಮಿಸಿದರು.

ಅನಿವಾರ್ಯ ವಾಸ್ತವ್ಯ: ‘ಬಿಜೆಪಿ ಕುತಂತ್ರದಿಂದ ರಕ್ಷಿಸಿಕೊಳ್ಳಲು ಶಾಸಕರ ರೆಸಾರ್ಟ್‌ ವಾಸ್ತವ್ಯ ಅನಿವಾರ್ಯವಾಯಿತು. ಕ್ಷೇತ್ರಗಳಿಗೆ ತೆರಳಿ ಬರ ಪರಿಸ್ಥಿತಿ ನಿರ್ವಹಣೆ ಮಾಡುವಂತೆ, ಅಭಿವೃದ್ಧಿ ಕಾರ್ಯಗಳತ್ತ ಗಮನ ಕೇಂದ್ರೀಕರಿಸುವಂತೆ ಶಾಸಕರಿಗೆ ಸೂಚನೆ ನೀಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

‘ಭಾನುವಾರ ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್‌ ಆರೋಗ್ಯ ವಿಚಾರಿಸಿದ್ದೇವೆ. ಘಟನೆ ಕುರಿತು ಅವರು ಹಾಗೂ ಗಣೇಶ್‌ರಿಂದ ಮಾಹಿತಿ ಪಡೆದಿದ್ದೇನೆ’ ಎಂದರು.

‘ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಗೈರಾದ ನಾಲ್ವರು ಶಾಸಕರಿಗೆ ಈಗಾಗಲೇ ಷೋಕಾಸ್ ನೋಟಿಸ್ ನೀಡಿದ್ದು, ಅಲ್ಪಸಮಯದಲ್ಲಿ ಉತ್ತರಿಸುವಂತೆ ಸೂಚಿಸಲಾಗಿತ್ತು. ಆ ಉತ್ತರ ಆಧರಿಸಿ ಪಕ್ಷ ಕ್ರಮ ತೆಗೆದುಕೊಳ್ಳಲಿದೆ’ ಎಂದರು.

ಬಿಲ್ ಎಷ್ಟು?

ಶಾಸಕರ ರೆಸಾರ್ಟ್‌ ವಾಸದ ಬಿಲ್‌ ಎಷ್ಟು? ಎಂಬ ಗುಟ್ಟನ್ನು ಕಾಂಗ್ರೆಸ್ ನಾಯಕರು ಬಿಟ್ಟುಕೊಟ್ಟಿಲ್ಲ.

ಈಗಲ್‌ಟನ್‌ನಲ್ಲಿ 40 ಹಾಗೂ ವಂಡರ್‌ಲಾ ರೆಸಾರ್ಟಿನಲ್ಲಿ 20 ಕೊಠಡಿಯನ್ನು ಶಾಸಕರು ಹಾಗೂ ಎಐಸಿಸಿ ಪದಾಧಿಕಾರಿಗಳಿಗಾಗಿ ಕಾಯ್ದಿರಿಸಲಾಗಿತ್ತು. ಇಲ್ಲಿನ ಒಂದು ಕೊಠಡಿಯ ದಿನದ ಬಾಡಿಗೆಯು ₹6–8 ಸಾವಿರ ಇದೆ. ಊಟೋಪಚಾರಕ್ಕೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ.

ಕೆಪಿಸಿಸಿ ಹೆಸರಿನಲ್ಲಿ ಬಿಲ್‌ ಪಾವತಿ ಮಾಡಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು. ಹಿಂದಿನ ಕೆಲವು ರೆಸಾರ್ಟ್‌ ವಾಸ್ತವ್ಯದ ಸಂದರ್ಭದಲ್ಲಿಯೂ ಕೆಪಿಸಿಸಿ ಹೆಸರಿನಲ್ಲಿ ಬಿಲ್‌ ಪಾವತಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.