ADVERTISEMENT

ಭಾರತ್‌ ಮಾಲಾ ಯೋಜನೆ ಅಡಿ 10 ಸಾವಿರ ಕಿ.ಮೀ ಹೆದ್ದಾರಿ ಅಭಿವೃದ್ಧಿ: ಗಡ್ಕರಿ

2025– 26ಕ್ಕೆ ಬೆಂಗಳೂರು– ಕಡಪ– ವಿಜಯವಾಡ ಕಾರಿಡಾರ್‌ ಪೂರ್ಣ ನಿರೀಕ್ಷೆ: ಸಚಿವ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 21:01 IST
Last Updated 5 ಜನವರಿ 2023, 21:01 IST
   

ರಾಮನಗರ: ಭಾರತ್‌ ಮಾಲಾ ಯೋಜನೆ ಅಡಿ ದೇಶದಲ್ಲಿ ಅಂದಾಜು ₹4.5 ಲಕ್ಷ ಕೋಟಿ ವೆಚ್ಚದಲ್ಲಿ ಒಟ್ಟು 10 ಸಾವಿರ ಕಿ.ಮೀ ಉದ್ದದ 27 ಗ್ರೀನ್‌ಫೀಲ್ಡ್‌ ಎಕ್ಸ್‌ಪ್ರೆಸ್‌ ವೇ ಮತ್ತು ಕಾರಿಡಾರ್‌ ನಿರ್ಮಿಸುತ್ತಿದ್ದು, ಆ ಪೈಕಿ ಒಂದು ಎಕ್ಸ್‌ಪ್ರೆಸ್ ವೇ ಹಾಗೂ ಎರಡು ಆರ್ಥಿಕ ಕಾರಿಡಾರ್‌ ಕರ್ನಾಟಕದ ಮೂಲಕ ಹಾದುಹೋಗಲಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

‘ಈ 10 ಸಾವಿರ ಕಿ.ಮೀ ಪೈಕಿ ಮೊದಲ ಹಂತದಲ್ಲಿ ₹2.78 ಲಕ್ಷ ಕೋಟಿ ವೆಚ್ಚದಲ್ಲಿ 6,138 ಕಿ.ಮೀ ಉದ್ದದ ಕಾಮಗಾರಿಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಉಳಿದ ಕಾಮಗಾರಿಗಳಿಗೆ 2023-24ನೇ ಸಾಲಿನಲ್ಲಿ ಅನುಮೋದನೆ ನೀಡಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕರ್ನಾಟಕ–ಆಂಧ್ರಪ್ರದೇಶ ನಡು
ವಿನ 342 ಕಿ.ಮೀ ಉದ್ದದ ಬೆಂಗಳೂರು– ಕಡಪ– ವಿಜಯವಾಡ ಕಾರಿಡಾರ್‌ ಅನ್ನು ₹13,600 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಲ್ಲಿ 275 ಕಿ.ಮೀ ಉದ್ದದ ಕಾಮಗಾರಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. 2025– 26ರ ವೇಳೆಗೆ ಈ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ. ಈ ಯೋಜನೆಯಿಂದಾಗಿ ಈ ನಗರಗಳ ನಡುವಿನ ಅಂತರ 75 ಕಿ.ಮೀ ನಷ್ಟು ಕಡಿಮೆ ಆಗಲಿದ್ದು, ಪ್ರಯಾಣದ ಅವಧಿ 5 ಗಂಟೆಯಷ್ಟು ಕಡಿಮೆ ಆಗಲಿದೆ ಎಂದರು.

ADVERTISEMENT

ಮುಂಬೈ ಮತ್ತು ಕನ್ಯಾಕುಮಾರಿ ನಡುವಿನ 1620 ಕಿ.ಮೀ ಉದ್ದದ ಕರಾವಳಿ ಹೆದ್ದಾರಿ ಸಹ ನಿರ್ಮಾಣ ಹಂತದಲ್ಲಿದೆ. 261 ಕಿ.ಮೀ ಉದ್ದದ ಎರಡು ಪ್ಯಾಕೇಜ್‌ ಕಾಮಗಾರಿ ಮುಗಿದಿದೆ. ಮಂಗಳೂರು ಬೈಪಾಸ್ ಮತ್ತು ಕುಮಟಾ ಬೈಪಾಸ್‌ನ ಎರಡು ಪ್ಯಾಕೇಜ್‌ ಕಾಮಗಾರಿ ಡಿಪಿಆರ್ ಹಂತದಲ್ಲಿದ್ದು, ಇದಕ್ಕೆ ₹3,500
ಕೋಟಿ ವೆಚ್ಚ ಅಂದಾಜಿಸಲಾಗಿದೆ. ಕರ್ನಾಟಕದಲ್ಲಿ ಈ ಹೆದ್ದಾರಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಜಿಲ್ಲೆಗಳಲ್ಲಿ ಹಾದುಹೋಗಲಿದೆ ಎಂದು ಅವರು ಹೇಳಿದರು.

ಸೋಲಾಪುರ– ಕರ್ನೂಲ್‌– ಚೆನ್ನೈ ಆರ್ಥಿಕ ಕಾರಿಡಾರ್‌: ಸೂರತ್‌– ಚೆನ್ನೈ ಎಕ್ಸ್‌ಪ್ರೆಸ್‌ ವೇ ಭಾಗವಾಗಿ ಈ ಕಾರಿಡಾರ್ ನಿರ್ಮಾಣ ಆಗುತ್ತಿದ್ದು, ಕರ್ನಾಟಕ ಸೇರಿ ಆರು ರಾಜ್ಯಗಳಲ್ಲಿ ಹಾದುಹೋಗಲಿದೆ. 1,270 ಕಿ.ಮೀ ಉದ್ದದ ಈ ಯೋಜನೆಗೆ ಒಟ್ಟು ₹47,000 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಈ ಕಾರಿಡಾರ್ ಅಡಿ ಸೋಲಾಪುರ– ಕರ್ನೂಲ್‌ ಎಕ್ಸ್‌ಪ್ರೆಸ್ ವೇ ತಲೆ ಎತ್ತಲಿದೆ. ಇದರಿಂದಾಗಿ ಈ ಎರಡು ನಗರಗಳ ಪ್ರಯಾಣದ ಅವಧಿಯು 10 ಗಂಟೆಯಿಂದ 4 ಗಂಟೆಗೆ ಇಳಿಕೆ ಆಗಲಿದೆ. ಕಲಬುರ್ಗಿ, ಯಾದಗಿರಿ, ರಾಯಚೂರು ಮಾರ್ಗವಾಗಿ ಇದು ಸಂಪರ್ಕಿಸಲಿದೆ. ರಾಜ್ಯದಲ್ಲಿ ಒಟ್ಟು 4 ಪ್ಯಾಕೇಜ್‌ಗಳಲ್ಲಿ 223 ಕಿ.ಮೀ ಉದ್ದದ ರಸ್ತೆಯನ್ನು ₹7,446 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. 2025ರ ಜೂನ್‌ ವೇಳೆಗೆ ಈ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ ಎಂದು ಸಚಿವರು ಮಾಹಿತಿ ನೀಡಿದರು.

ಭಾರತ್‌ಮಾಲಾ ಯೋಜನೆ: ಪುಣೆ– ಬೆಂಗಳೂರು ಹೊಸ ಹೆದ್ದಾರಿ ನಿರ್ಮಾಣ

ಭಾರತ್‌ಮಾಲಾ ಯೋಜನೆಯ ಎರಡನೇ ಹಂತದಲ್ಲಿ ಪುಣೆ– ಬೆಂಗಳೂರು ನಡುವೆ ಹೊಸ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಿಸಲು ಉದ್ದೇಶಿಸಲಾಗಿದೆ. 6 ಪಥಗಳ ಈ ಹೆದ್ದಾರಿಯು 700 ಕಿ.ಮೀ ಉದ್ದ ಇರಲಿದ್ದು, ಕರ್ನಾಟಕದಲ್ಲಿ 500 ಕಿ.ಮೀ ಹಾಗೂ ಮಹಾರಾಷ್ಟ್ರದಲ್ಲಿ 200 ಕಿ.ಮೀ ಹಾದು ಹೋಗಲಿದೆ. ಇದಕ್ಕೆ ₹45 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಹೊಸ ಹೆದ್ದಾರಿಯು ಮುಂಬೈ– ಪುಣೆ ಎಕ್ಸ್‌ಪ್ರೆಸ್‌ ವೇ ಹಾಗೂ ಬೆಂಗಳೂರು– ಚೆನ್ನೈ ಎಕ್ಸ್‌ಪ್ರೆಸ್‌ ವೇ ಅನ್ನು ಬೆಸೆಯಲಿದೆ ಎಂದು ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.