ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಬೆಂಗಳೂರು: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಂಚಗಳನ್ನು ಪೂರೈಸಲು ಅರ್ಹತೆ ಇಲ್ಲದ ಕಂಪನಿಗೆ ನೀಡಿದ್ದ ₹5 ಕೋಟಿ ಮೊತ್ತದ ಟೆಂಡರ್ ಅನ್ನು ಸಮಾಜಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಮತ್ತೆ ರದ್ದು ಮಾಡಿದ್ದಾರೆ.
ಸಮಾಜಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಎರಡು ಸ್ತರದ ಮಂಚಗಳನ್ನು (ಟೂ–ಟಯರ್ ಕಾಟ್) ಪೂರೈಸಲು ಇಲಾಖೆಯ ಆಯುಕ್ತರ ಕಚೇರಿಯ ಟೆಂಡರ್ ಪ್ರಾಧಿಕಾರ ₹5 ಕೋಟಿ ಹಾಗೂ ₹9.5 ಕೋಟಿ ಮೊತ್ತಕ್ಕೆ ಅರ್ಹ ಉತ್ಪಾದಕರು, ಸರಬರಾಜುದಾರರಿಂದ ಇದೇ ವರ್ಷದ ಮಾರ್ಚ್‌ನಲ್ಲಿ ಇ–ಟೆಂಡರ್ ಆಹ್ವಾನಿಸಿತ್ತು. ಆಯ್ಕೆಯಾದ ಕಂಪನಿಗೆ ಅರ್ಹತೆಯೇ ಇಲ್ಲ ಎಂದು ಬೆಂಗಳೂರು ನಗರ ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ಸೇರಿದಂತೆ ಹಲವು ಕಂಪನಿಗಳು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದವು.
ವಿಚಾರಣೆ ನಡೆಸಿದ್ದ ಮಣಿವಣ್ಣನ್, ₹5 ಕೋಟಿಯ ಒಂದು ಟೆಂಡರ್ ಅನ್ನು ಅಂದೇ ರದ್ದುಪಡಿಸಿದ್ದರು. ಉಳಿದ ₹9.5 ಕೋಟಿ ಟೆಂಡರ್ ಬಗ್ಗೆ ಮರುಪರಿಶೀಲನೆ ನಡೆಸಬೇಕು. ಸಚಿವ ಸಂಪುಟದ ಅನುಮೋದನೆ ಪಡೆದು ಎರಡೂ ಮೊತ್ತಕ್ಕೆ ಒಟ್ಟಿಗೆ ಇ–ಟೆಂಡರ್ ಅಧಿಸೂಚನೆ ಹೊರಡಿಸಲು ಕ್ರಮವಹಿಸಬೇಕು. ಈ ಕುರಿತು ಲಿಖಿತ ವರದಿ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದರು. ಟೆಂಡರ್ ರದ್ದಾದರೂ, ಇಲಾಖೆಯ ಆಯುಕ್ತರ ಕಚೇರಿ ₹5 ಕೋಟಿ ಮೊತ್ತದ ಮಂಚಗಳನ್ನು ಪೂರೈಸಲು ಬಿಡ್‌ದಾರರನ್ನು ಆಯ್ಕೆ ಮಾಡಿತ್ತು.
ಈ ಕುರಿತು ‘ಪ್ರಜಾವಾಣಿ’ ಜೂನ್ 28ರ ಸಂಚಿಕೆಯಲ್ಲಿ ‘ಟೆಂಡರ್ ರದ್ದಾದರೂ ಮಂಚ’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಆಧಾರದಲ್ಲಿ ಸ್ವಯಂ ವಿಚಾರಣೆ ಕೈಗೆತ್ತುಕೊಂಡ ಪ್ರಧಾನ ಕಾರ್ಯದರ್ಶಿ, ಟೆಂಡರ್ ಅನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
ತಾಂತ್ರಿಕ ವರದಿಯೇ ನಿಯಮಬಾಹಿರ
ಮಂಚಗಳ ಗುಣಮಟ್ಟ ಕುರಿತು ನಿಯಮ ಬಾಹಿರವಾಗಿ ತಾಂತ್ರಿಕ ವರದಿ ನೀಡಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಇಬ್ಬರು ಅಧ್ಯಾಪಕರಿಗೆ ತಾಂತ್ರಿಕ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.
₹14.5 ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಗುತ್ತಿಗೆದಾರರು ನೀಡುವ ಮಂಚಗಳ ಗುಣಮಟ್ಟ ಪರಿಶೀಲಿಸಿ, ತಾಂತ್ರಿಕ ವರದಿ ನೀಡಲು ಪರಿಣತರನ್ನು ನಿಯೋಜಿಸುವಂತೆ ಸಮಾಜಕಲ್ಯಾಣ ಇಲಾಖೆ ಆಯುಕ್ತರು ತಾಂತ್ರಿಕ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಆದರೆ, ಪತ್ರ ಇದುವರೆಗೂಇಲಾಖೆ ನಿರ್ದೇಶಕರಿಗೆ ತಲುಪಿಲ್ಲ.
ಮಂಚಗಳ ಗುಣಮಟ್ಟ ಪರಿಶೀಲನೆಗೆ, ಟೆಂಡರ್ ಪರಿಶೀಲನಾ ಸಮಿತಿಗೆ ತಾಂತ್ರಿಕ ಪರಿಣತರನ್ನು ನಿಯೋಜನೆ ಮಾಡದಿದ್ದರೂ, ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕರಾದ ಎ.ಎಂ, ಸತೀಶ್, ಎನ್. ಮಲ್ಲಿಕಾರ್ಜುನ ಭಾಗವಹಿಸಿ, ನಿಯಮಬಾಹಿರವಾಗಿ ತಾಂತ್ರಿಕ ಗುಣಮಟ್ಟದ ವರದಿ ಸಲ್ಲಿಸಿದ್ದಾರೆ. ಈ ಇಬ್ಬರಿಗೆ ತಾಂತ್ರಿಕ ಶಿಕ್ಷಣ ಇಲಾಖೆ ನೋಟಿಸ್ ನೀಡಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.