ಬೆಂಗಳೂರು: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಂಚಗಳನ್ನು ಪೂರೈಸಲು ಕರೆದಿದ್ದ ₹14.5 ಕೋಟಿ ಮೌಲ್ಯದ ಟೆಂಡರ್ ಪ್ರಕ್ರಿಯೆಯನ್ನು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಳೆದ ತಿಂಗಳೇ ರದ್ದು ಮಾಡಿದ್ದರೂ, ಅರ್ಹತೆ ಇಲ್ಲದ ಕಂಪನಿಗೆ ಮಂಚಗಳನ್ನು ಪೂರೈಸಲು ಟೆಂಡರ್ ಪರಿಶೀಲನಾ ಸಮಿತಿ ಶುಕ್ರವಾರ ಸಮ್ಮತಿ ನೀಡಿದೆ.
ಟೆಂಡರ್ ಲೋಪಗಳ ಕುರಿತು ದೂರುಗಳನ್ನು ಸ್ವೀಕರಿಸಿ, ಮೇ 28ರಂದು ವಿಚಾರಣೆ ನಡೆಸಿದ್ದ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್, ‘₹5 ಕೋಟಿಯ ಒಂದು ಟೆಂಡರ್ ಅನ್ನು ಅಂದೇ ರದ್ದುಪಡಿಸಿದ್ದರು. ಉಳಿದ ₹9.5 ಕೋಟಿ ಟೆಂಡರ್ ಬಗ್ಗೆ ಮರುಪರಿಶೀಲನೆ ನಡೆಸಬೇಕು. ಸಚಿವ ಸಂಪುಟದ ಅನುಮೋದನೆ ಪಡೆದು ಎರಡೂ ಮೊತ್ತಕ್ಕೆ ಒಟ್ಟಿಗೆ ಇ–ಟೆಂಡರ್ ಅಧಿಸೂಚನೆ ಹೊರಡಿಸಲು ಕ್ರಮವಹಿಸಬೇಕು. ಈ ಕುರಿತು ಲಿಖಿತ ವರದಿ ಸಲ್ಲಿಸಬೇಕು’ ಎಂದು ಆದೇಶ ಹೊರಡಿಸಿದ್ದರು. ಅವರ ಆದೇಶವನ್ನೂ ಲೆಕ್ಕಿಸದೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯ ಟೆಂಡರ್ ಪರಿಶೀಲನಾ ಸಮಿತಿ ಬಿಡ್ ಅಂತಿಮಗೊಳಿಸಿದೆ.
ಸಮಾಜ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ₹5 ಕೋಟಿ ಹಾಗೂ ₹9.5 ಕೋಟಿ ಮೊತ್ತದಲ್ಲಿ ಎರಡು ಸ್ತರದ ಮಂಚಗಳನ್ನು (ಟೂ–ಟೈರ್ ಕಾಟ್) ಪೂರೈಸಲು ಅರ್ಹ ತಯಾರಕರು, ಸರಬರಾಜುದಾರರಿಂದ ಇದೇ ವರ್ಷದ ಮಾರ್ಚ್‌ನಲ್ಲಿ ಇ–ಟೆಂಡರ್ ಆಹ್ವಾನಿಸಲಾಗಿತ್ತು.
ಟೆಂಡರ್ ಪ್ರಕ್ರಿಯೆಯಲ್ಲಿ ಏಳು ಮಂದಿ ಬಿಡ್‌ದಾರರು ಭಾಗವಹಿಸಿದ್ದರು. ಹಲವು ಅರ್ಹ ಕಂಪನಿಗಳು ಇದ್ದರೂ, ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಅರ್ಹತೆ ಪಡೆಯದ ‘ಛಾಯ್ಸ್ ಫರ್ನ್ ಟೆಕ್ ಎಲ್‌ಎಲ್‌ಪಿ’ ಕಂಪನಿಗೆ ಮೊದಲ ಹಂತದಲ್ಲಿ ₹5 ಕೋಟಿ ಮೊತ್ತಕ್ಕೆ (ಆಯ್ಕೆಯಾದ ಗುತ್ತಿಗೆ ಕಂಪನಿ ನಮೂದಿಸಿದ ಮೊತ್ತ ₹4.76 ಕೋಟಿ) ಮಂಚಗಳನ್ನು ಪೂರೈಸಲು ಅವಕಾಶ ನೀಡಲಾಗಿದೆ.
ಅನುಮೋದನೆ ಇಲ್ಲದೇ ಟೆಂಡರ್
ಕರ್ನಾಟಕ ರಾಜ್ಯ ವ್ಯಾಪಾರ ವಹಿವಾಟು ನಿಯಮಗಳ ಪ್ರಕಾರ ಯಾವುದೇ ಟೆಂಡರ್ ಕರೆಯುವ ಸಾಮಗ್ರಿ ಏಕರೂಪವಾಗಿದ್ದು, ಅದರ ಒಟ್ಟಾರೆ ಮೊತ್ತ ₹10 ಕೋಟಿ ಮೀರಿದ್ದರೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗುತ್ತದೆ.
ಎರಡು ಸ್ತರದ ಮಂಚಗಳನ್ನು ಪೂರೈಸಲು ನಿಗದಿಯಾಗಿದ್ದ ಮೊತ್ತವನ್ನು ಎರಡು ಭಾಗವಾಗಿ ವಿಂಗಡಿಸಿ, ಒಂದೇ ತಿಂಗಳಲ್ಲಿ ಎರಡು ಇ–ಟೆಂಡರ್ ಅಧಿಸೂಚನೆ ಹೊರಡಿಸಲಾಗಿದೆ. ಈ ರೀತಿ ವಿಭಜನೆ ಮಾಡಿ ನಿಯಮ ಬಾಹಿರವಾಗಿ ಟೆಂಡರ್ ಕರೆಯಲಾಗಿದೆ. ಈ ಅಂಶವನ್ನೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರು ಟೆಂಡರ್ ರದ್ದತಿಯ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ತಾಂತ್ರಿಕ ಅನುಮತಿಯಲ್ಲೂ ಭಿನ್ನ ಪತ್ರ
ಸರ್ಕಾರದ ಇಲಾಖೆಗಳು, ಸಂಸ್ಥೆ, ನಿಗಮ ಮಂಡಳಿಗೆ ಸಾಮಗ್ರಿ ಸರಬರಾಜು ಮಾಡುವ ಗುತ್ತಿಗೆದಾರರು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆಯ ಅಧಿನಿಯಮದ ಪ್ರಕಾರ ನಿಗದಿತ ನಮೂನೆಯ ಮಾದರಿಗಳನ್ನು ಸಲ್ಲಿಸಬೇಕು. ಅವುಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆ ನಿಯೋಜಿಸಿದ ತಾಂತ್ರಿಕ ಪರಿಶೀಲನಾ ಸಮಿತಿ ಪರಿಶೀಲಿಸಿ, ಪ್ರಮಾಣಪತ್ರ ನೀಡುತ್ತದೆ. ನಂತರವೇ ಆರ್ಥಿಕ ಬಿಡ್ ತೆರೆಯಲಾಗುತ್ತದೆ.
ತಾಂತ್ರಿಕ ಸಮಿತಿ ಪರಿಶೀಲನೆಯ ವೇಳೆ ‘ಛಾಯ್ಸ್ ಫರ್ನ್ ಟೆಕ್ ಎಲ್‌ಎಲ್‌ಪಿ ಕಂಪನಿ’ ನಿಗದಿಪಡಿಸಿದ ಮಾದರಿಗಳನ್ನು ನೀಡಿಲ್ಲ ಎಂದು ಪ್ರಮಾಣಪತ್ರ ನೀಡಿದೆ. ಕೆಲ ದಿನಗಳ ನಂತರ ಮತ್ತೆ ಅದೇ ಕಂಪನಿಯ ಮಾದರಿಗಳನ್ನು ಅನುಮೋದಿಸಿ ಸಮಿತಿ ಮತ್ತೊಂದು ಪತ್ರ ನೀಡಿದೆ.
ಅರ್ಹ ಕಂಪನಿಗಳಿಂದ ದೂರು ಸಲ್ಲಿಕೆ:
‘ಯಾವುದೇ ಸಾಮಗ್ರಿಯನ್ನು ಸರಬರಾಜು ಮಾಡಲು ಇ–ಟೆಂಡರ್‌ಗೆ ಅರ್ಜಿ ಸಲ್ಲಿಸುವ ಕಂಪನಿಗಳು ಸರ್ಕಾರ ಹಾಗೂ ಸರ್ಕಾರದ ಸಂಸ್ಥೆಗಳಿಗೆ, ನಿಗಮಗಳಿಗೆ ನಿಗದಿತ ಸಾಮಗ್ರಿಗಳನ್ನು ಪೂರೈಸಿದ ಅನುಭವ ಪ್ರಮಾಣಪತ್ರ ಹೊಂದಿರಬೇಕು. ಆದರೆ, ಆಯ್ಕೆಯಾದ ಕಂಪನಿಗೆ ಅಂತಹ ಯಾವುದೇ ಅರ್ಹತೆ ಇಲ್ಲ. ಬೇರೆ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಉಪಗುತ್ತಿಗೆ ಪಡೆದು ಸಾಮಗ್ರಿ ಪೂರೈಸುತ್ತಿದೆ. ತಾಂತ್ರಿಕ ಪರಿಶೀಲನೆಗೆ ಬೇರೆಬೇರೆ ರೀತಿಯ ಮಂಚಗಳ ಮಾದರಿಗಳನ್ನು ನೀಡಿದೆ. ಟೆಂಡರ್‌ನಲ್ಲಿ ನಮೂದಿಸಿದ ಷರತ್ತುಗಳನ್ನು ಪೂರೈಸಿಲ್ಲ. ಈ ಮಾದರಿಗಳಲ್ಲಿ ಹಲವು ನ್ಯೂನತೆ, ವ್ಯತ್ಯಾಸಗಳಿವೆ. ಅಂತಹ ಮಂಚಗಳನ್ನು ಪೂರೈಸಿದರೆ ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹಾಗಾಗಿ, ಟೆಂಡರ್ ರದ್ದು ಮಾಡಬೇಕು’ ಎಂದು ಕರ್ನಾಟಕ ಸರ್ಕಾರದ ಉದ್ಯಮವಾದ ಬೆಂಗಳೂರು ನಗರ ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ಸೇರಿದಂತೆ ಹಲವು ಕಂಪನಿಗಳು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.
ಟೆಂಡರ್ ರದ್ದು ಮಾಡಬೇಕು. ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಹೊಂದಿರುವ, ಗುಣಮಟ್ಟದ ಟೂ–ಟೈರ್ ಕಾಟ್ ಮಾದರಿ ಸಲ್ಲಿಸಿರುವ ಕಂಪನಿಗಳಿಗೆ ಪೂರೈಕೆಯ ಅವಕಾಶ ನೀಡಬೇಕು.ಕೇಶವ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ನಗರ ಜಿಲ್ಲಾ ಸರಬರಾಜು ಮತ್ತು ಮಾರಾಟಗಾರರ ಸಹಕಾರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.