ಎಂ.ಬಿ. ಪಾಟೀಲ
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಬ್ರಿಟನ್ ಮೂಲದ ಟೆಸ್ಕೋ ಕಂಪನಿ ರಾಜ್ಯದಲ್ಲಿ ನೂತನ ವಿತರಣಾ ಕೇಂದ್ರ ಸ್ಥಾಪಿಸಲು ಮುಂದಾಗಿದ್ದು, 15 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಭಾರತ ಮತ್ತು ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಚಂದ್ರು ಅಯ್ಯರ್ ಹಮ್ಮಿಕೊಂಡಿದ್ದ ಸಂತೋಷಕೂಟ ಸಮಾರಂಭದಲ್ಲಿ ಅವರು ಮಾತನಾಡಿದರು.
ರೋಲ್ಸ್-ರಾಯ್ಸ್ ಕಂಪನಿ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಹೊಸ ಅವಕಾಶಗಳನ್ನು ಅರಸುತ್ತಿದೆ. ಸರ್ಕಾರ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರೈಸಲಿದೆ. ಎರಡೂ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ ಸದ್ಯಕ್ಕೆ ವಾರ್ಷಿಕ 2,500 ಕೋಟಿ ಪೌಂಡ್ ವಹಿವಾಟು ನಡೆಯಲಿದೆ. ಇದು ಮುಂದಿನ ಐದು ವರ್ಷಗಳಲ್ಲಿ 9,000 ಕೋಟಿ ಪೌಂಡ್‌ಗೆ ಹೆಚ್ಚಲಿದೆ. ಮುಖ್ಯವಾಗಿ ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಸರಕುಗಳಲ್ಲಿ ಶೇ 99ರಷ್ಟು ಉತ್ಪನ್ನಗಳಿಗೆ ಮತ್ತು ಅಲ್ಲಿಂದ ಇಲ್ಲಿಗೆ ಬರುವ ಶೇ 90ರಷ್ಟು ಉತ್ಪನ್ನಗಳಿಗೆ ಸುಂಕ ಇರುವುದಿಲ್ಲ. ಈ ಒಪ್ಪಂದವು ದ್ವಿಪಕ್ಷೀಯ ವಾಣಿಜ್ಯ ವಹಿವಾಟನ್ನು ವೃದ್ಧಿಸಲಿದೆ ಎಂದರು.
ರಾಜ್ಯದಲ್ಲಿ ಬ್ರಿಟನ್ ಮೂಲದ ಬಿಎಇ ಸಿಸ್ಟಮ್ಸ್, ಎಆರ್‌ಎಂ, ಎಚ್‌ಎಸ್‌ಬಿಸಿ, ಅವಿವಾ ಮುಂತಾದ ಕಂಪನಿಗಳಿದ್ದು, 30 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದದಿಂದ ರಾಜ್ಯದಲ್ಲಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಬಂಡವಾಳ ತೊಡಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಬ್ರಿಟಿಷ್ ಟ್ರೇಡ್ ಕಮಿಷನರ್ ಹರಿಜಿಂದರ್ ಕಂಗ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.