ADVERTISEMENT

ವಾಹನದಲ್ಲೇ ಪರೀಕ್ಷಿಸಿ, ಸ್ಮಾರ್ಟ್‌ಫೋನಲ್ಲೇ ಉಪಚರಿಸಿ

ಕೊರೊನಾ ಅಟ್ಟಹಾಸ: ಬೆಂಗಳೂರು ಮೂಲದ ಅಮೆರಿಕದ ವೈದ್ಯೆಯ ಸಲಹೆ

ಎಂ.ಜಿ.ಬಾಲಕೃಷ್ಣ
Published 4 ಏಪ್ರಿಲ್ 2020, 21:18 IST
Last Updated 4 ಏಪ್ರಿಲ್ 2020, 21:18 IST
ಡಾ. ಚಂದ್ರಕಲಾ ಗೌಡ
ಡಾ. ಚಂದ್ರಕಲಾ ಗೌಡ   

ಬೆಂಗಳೂರು: ‘ಶಂಕಿತ ವ್ಯಕ್ತಿ ಕಾರಲ್ಲೋ, ಇತರ ವಾಹನದಲ್ಲಿ ಕುಳಿತಿರುವಂತೆಯೇ ಪರೀಕ್ಷಿಸಿ, ಗಂಟಲು ದ್ರವ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೆ ತನ್ನಿ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ವೈದ್ಯರು ಸ್ಮಾರ್ಟ್‌ಫೋನ್‌ನಲ್ಲಿ
ನೋಡಿಯೇ ಉಪಚರಿಸಲಿ. ಇದರಿಂದ ತ್ವರಿತ ಚಿಕಿತ್ಸೆಯೂ ಸಾಧ್ಯ, ವೈದ್ಯರೂ ಸುರಕ್ಷಿತ...’

ರಾಜ್ಯದ ವೈದ್ಯ ಸಮುದಾಯಕ್ಕೆ ಇಂತಹ ಸಲಹೆ ನೀಡಿದವರು ಬೆಂಗಳೂರು ಮೂಲದ ಮಕ್ಕಳ ತಜ್ಞೆ, ಅಮೆರಿಕದ ಉಥಾ ಮತ್ತು ಐಡಹೊ ರಾಜ್ಯಗಳ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಚಂದ್ರಕಲಾ ಗೌಡ. ವಾಟ್ಸ್‌ಆ್ಯಪ್‌ ಕರೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಕೊರೊನಾ ಹರಡುವ ವೇಗ, ವೈದ್ಯರು ಅದಕ್ಕೆ ತುತ್ತಾಗುವ ಭೀತಿ ನೋಡಿದರೆ ನಾವು ಅದಕ್ಕಿಂತಲೂ ವೇಗವಾಗಿ ಕೆಲಸ ಮಾಡಬೇಕಾಗಿದೆ. ಸಮಯ ವ್ಯರ್ಥ ಮಾಡುವಂತೆಯೇ ಇಲ್ಲ ಎಂದರು.

‘ಭಾರತದಲ್ಲಿ ಸಾಕಷ್ಟು ವೈದ್ಯಕೀಯ ಸಲಕರಣೆಗಳಿಲ್ಲ. ಆದರೆ ಕೊರೊನಾ ವೈರಸ್‌ಗೆ ಅದೆಲ್ಲ ಗೊತ್ತಿಲ್ಲ. ಶಂಕಿತರನ್ನು ಆಸ್ಪತ್ರೆಗೆ ಬರುವ ಮೊದಲೇ ಪತ್ತೆಹಚ್ಚುವ ಕೆಲಸ ಆಗಿದ್ದೇ ಆದರೆ ಸಮುದಾಯಕ್ಕೆ ಹರಡುವ ಪ್ರಮಾಣ ಕಡಿಮೆಯಾಗುತ್ತದೆ’ ಎಂದರು.

ADVERTISEMENT

‘ದಟ್ಟಣೆ ಇರುವಲ್ಲಿ ಸೋಂಕು ಬೇಗ ವ್ಯಾಪಿಸುತ್ತಿದೆ. ರೋಗನಿರೋಧಕ ಶಕ್ತಿ ಅಧಿಕ ಇರುವವರಲ್ಲಿ ಈ ವೈರಾಣು ಇದ್ದರೆ ಅವರಿಗೆ ಜ್ವರ, ಕೆಮ್ಮಿನ ಲಕ್ಷಣ ಕಾಣಿಸದೆ ಇರಬಹುದು. ಆದರೆ ಅವರಿಂದ ಇನ್ನೊಬ್ಬರಿಗೆ ಸೋಂಕು ಹರಡುತ್ತಲೇ ಇರುತ್ತದೆ. ಹೀಗಾಗಿ ನಮಗೆ ಕಾಯಿಲೆಯ ಲಕ್ಷಣ ಇರಲಿ, ಇಲ್ಲದಿರಲಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲೇ
ಬೇಕು’ ಎಂಬ ಸ್ಪಷ್ಟ ಸಂದೇಶ ಅವರದು.

ಭಾರತದ ಕ್ರಮ ಶ್ಲಾಘನೀಯ: ‘ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತದಲ್ಲಿ ಕೈಗೊಂಡ ಕ್ರಮಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇದುವರೆಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳು ನಿಜಕ್ಕೂ ಉತ್ತಮವಾಗಿದೆ. ಆದರೆ ಇನ್ನೂ ಎರಡು ವಾರ ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಜನ ಅಂತರ ಕಾಯ್ದುಕೊಳ್ಳುವುದರ ಹೊರತು ಬೇರೆ ದಾರಿಯೇ ಇಲ್ಲ’ ಎಂದರು.

‘ಕೊರೊನಾ ಇಡೀ ಜಗತ್ತಿಗೇ ಹೊಸ ಸೋಂಕು. ಶ್ರೀಮಂತ, ಬಡ ರಾಷ್ಟ್ರವೆಂಬ ಭೇದ ಇಲ್ಲದೆ ಎಲ್ಲೆಡೆ ಇದು ದಾಳಿ ನಡೆಸಿದೆ. ಎಲ್ಲರಿಗೂ ಹೊಸ ಅನುಭವ, ಅಮೆರಿಕವೂ ಇದಕ್ಕೆ ಹೊರತಲ್ಲ. ಹೀಗಾಗಿ ಅಮೆರಿಕದಲ್ಲೂ ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸುತ್ತಿದೆ. ಇಲ್ಲಿಯ ಸ್ಥಿತಿ ಭಾರತಕ್ಕೆ ಬರದಿರಲಿ ಎಂದು ಪ್ರಾರ್ಥಿಸುತ್ತೇನೆ. ಏಕೆಂದರೆ ಸಮುದಾಯಕ್ಕೆ ಸೋಂಕು ಹರಡಿದರೆ ದೊಡ್ಡ ಪ್ರಮಾಣದಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆಯೇ ಭಾರತದಲ್ಲಿ ಇಲ್ಲ. ನನ್ನ 80 ವರ್ಷದ ತಾಯಿ, ಸಹೋದರಿ, ಸಂಬಂಧಿಕರೆಲ್ಲ ಬೆಂಗಳೂರಿನಲ್ಲೇ ಇದ್ದಾರೆ. ಅವರ ಆರೋಗ್ಯದ ಬಗ್ಗೆ ನನಗೆ ಬಹಳ ಕಾಳಜಿ ಇದೆ’ ಎಂದು ಡಾ.ಚಂದ್ರಕಲಾ ಅವರು ಹೇಳಿದರು.

ಬೆಂಗಳೂರಿನ ಪ್ರತಿಭೆ ಚಂದ್ರಕಲಾ

ಡಾ.ಚಂದ್ರಕಲಾ ಗೌಡ ಅವರು ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದವರು. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ (ಬಿಎಂಸಿ) ವ್ಯಾಸಂಗ ಮಾಡಿದವರು. ನಿಮ್ಹಾನ್ಸ್‌, ಮಣಿಪಾಲ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು 1993ರಲ್ಲಿ ಅಮೆರಿಕಕ್ಕೆ ತೆರಳಿದರು. ಅವರಿಗೆ ಇಬ್ಬರು ಪುತ್ರರಿದ್ದಾರೆ. ಸದ್ಯ ಎರಡು ರಾಜ್ಯಗಳ ಮುಖ್ಯ ವೈದ್ಯಾಧಿಕಾರಿಯಾಗಿರುವ ಅವರು, ಮೇ ತಿಂಗಳಲ್ಲಿ ಇನ್ನೂ 12 ರಾಜ್ಯಗಳ ಹೊಣೆ ಹೊರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.