ADVERTISEMENT

ಸಚಿವ ಸುನಿಲ್‌ ಕುಮಾರ್‌ ಒತ್ತಡ: ಸಮಾಜ ವಿಜ್ಞಾನದಲ್ಲೇ ನಾರಾಯಣ ಗುರು ಪಠ್ಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 6:21 IST
Last Updated 12 ಜುಲೈ 2022, 6:21 IST
ಇಂಧನ ಸಚಿವ ವಿ. ಸುನಿಲ್‌ ಕುಮಾರ್
ಇಂಧನ ಸಚಿವ ವಿ. ಸುನಿಲ್‌ ಕುಮಾರ್   

ಬೆಂಗಳೂರು: ಇಂಧನ ಸಚಿವ ವಿ. ಸುನಿಲ್‌ ಕುಮಾರ್ ಅವರ ಒತ್ತಾಯಕ್ಕೆ ಮಣಿದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನ ವಿಷಯದಲ್ಲೇ ಅಳವಡಿಸಲು ಆದೇಶ ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೋಮವಾರ ನಿರ್ದೇಶನ ನೀಡಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರು ಅವರಿಗೆ ಸಂಬಂಧಿಸಿದ ಪಠ್ಯವನ್ನು ಈ ಹಿಂದೆ ಇದ್ದಂತೆ ಸಮಾಜ ವಿಜ್ಞಾನ ವಿಷಯದಲ್ಲೇ ಅಳವಡಿಸುವಂತೆ ಸುನಿಲ್‌ ಕುಮಾರ್‌ ಅವರು ಬಿ.ಸಿ. ನಾಗೇಶ್‌ ಅವರಿಗೆ ಪತ್ರ ಬರೆದಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಉಪಸ್ಥಿತಿಯಲ್ಲೇ ನಾಗೇಶ್‌ ಅವರನ್ನು ಸೋಮವಾರ ಭೇಟಿಮಾಡಿ ಪತ್ರವನ್ನು ಸಲ್ಲಿಸಿದ್ದರು.

ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಠ್ಯವನ್ನು ಸಮಾಜ ವಿಜ್ಞಾನ ವಿಷಯದಿಂದ ಕನ್ನಡ ವಿಷಯಕ್ಕೆ ವರ್ಗಾವಣೆ ಮಾಡಿರುವುದನ್ನು ಆಕ್ಷೇಪಿಸಿ ಹಲವರು ತಮ್ಮ ಬಳಿ ಚರ್ಚಿಸಿರುವುದನ್ನು ಆಧರಿಸಿ ಪತ್ರ ಬರೆದಿರುವುದಾಗಿ ಇಂಧನ ಸಚಿವರು ತಿಳಿಸಿದ್ದರು.

ADVERTISEMENT

‘ನಾರಾಯಣ ಗುರು ಅವರಿಗೆ ಸಂಬಂಧಿಸಿದ ಪಠ್ಯವು ಈ ಹಿಂದೆ ಸಮಾಜ ವಿಜ್ಞಾನ ವಿಷಯದಲ್ಲಿತ್ತು. ಆಗ ಎಲ್ಲ ವಿದ್ಯಾರ್ಥಿಗಳೂ ಅದನ್ನು ಓದುತ್ತಿದ್ದರು. ಈಗ ಕನ್ನಡ ವಿಷಯಕ್ಕೆ ವರ್ಗಾವಣೆ ಮಾಡಿರುವುದರಿಂದ ಎಲ್ಲ ವಿದ್ಯಾರ್ಥಿಗಳೂ ಓದಲು ಅವಕಾಶವಾಗುವುದಿಲ್ಲ. ಈ ಕುರಿತು ಹಲವರು ಆಕ್ಷೇಪ ಎತ್ತಿದ್ದಾರೆ. ನಾಡಿನ ಅನೇಕ ಶೈಕ್ಷಣಿಕ ತಜ್ಞರು, ಹಿರಿಯರ ಒತ್ತಾಸೆಯಂತೆ ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಠ್ಯವನ್ನು ಸಮಾಜ ವಿಜ್ಞಾನ ವಿಷಯದಲ್ಲೇ ಮುಂದುವರಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.

ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಅಧಿಕೃತ ಟಿಪ್ಪಣಿ ಹೊರಡಿಸಿರುವ ನಾಗೇಶ್‌, ‘ಕನ್ನಡ ವಿಷಯದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟು, ಈ ಹಿಂದೆ ಇದ್ದಂತೆ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕದಲ್ಲಿ ತಕ್ಷಣ ಅಳವಡಿಸಲು ಆದೇಶ ಹೊರಡಿಸಬೇಕು’ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.