ADVERTISEMENT

 ಮೊಬೈಲ್ ಸಂದೇಶ ತಪ್ಪಾಗಿ ಅರ್ಥೈಸಿಕೊಂಡು ಗೊಂದಲ; ವಿಮಾನ ತಪಾಸಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 15:50 IST
Last Updated 14 ಆಗಸ್ಟ್ 2022, 15:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರೊಬ್ಬರ ಮೊಬೈಲ್‌ಗೆ ಬಂದ ಸಂದೇಶವನ್ನು ಸಹ ಪ್ರಯಾಣಿಕ ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭಾನುವಾರ ಕೆಲಕಾಲ ಗೊಂದಲದ ವಾತಾವರಣವನ್ನು ಸೃಷ್ಟಿಯಾಯಿತು.

ಯುವಕ ಬ ಮಂಗಳೂರು ವಿಮಾನನಿಲ್ದಾಣದಿಂದ ಮುಂಬೈಗೆ ಹೊರಟಿದ್ದರು. ಅದೇ ವೇಳೆ ಅವರ ಗೆಳತಿ ಮತ್ತೊಂದು ವಿಮಾನದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದರು. ಯುವಕ ಇದ್ದ ವಿಮಾನ ಹಾರಾಟದ ಸಲುವಾಗಿ ರನ್‌ವೇಯತ್ತ ಸಾಗುವಾಗ ಆತನಿಗೆ ಯುವತಿ ಸಂದೇಶ ಕಳುಹಿಸಿದ್ದರು. ಆ ಸಂದೇಶವನ್ನು ಯುವಕ ನೋಡುತ್ತಿದ್ದಾಗ, ಆತನ ಪಕ್ಕದ ಸೀಟಿನಲ್ಲಿದ್ದ ಪ್ರಯಾಣಿಕನೂ ಇಣುಕಿ ನೋಡಿದ್ದ. ಅದರಲ್ಲಿದ್ದ ‘ಬಾಂಬರ್‌’ ಎಂಬ ಪದವನ್ನು ತಪ್ಪಾಗಿ ಅರ್ಥೈಸಿಕೊಂಡು ವಿಮಾನದ ಸಿಬ್ಬಂದಿಗೆ ವಿಮಾನಕ್ಕೆ ಬೆದರಿಕೆ ಇದೆ ಎಂದು ಮಾಹಿತಿ ನೀಡಿದ್ದರು. ಬಳಿಕ ವಿಮಾನದ ಸಿಬ್ಬಂದಿಯು ಪ್ರಯಾಣಿಕರನ್ನು ಇಳಿಸಿದರು. ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ದು ಪರಿಶೀಲನೆಗೆ ಒಳಪಡಿಸಲಾಯಿತು. ವಿಮಾನದಲ್ಲಿ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿರಲಿಲ್ಲ. ಪ್ರಯಾಣಿಕರ ಬ್ಯಾಗ್‌ಗಳನ್ನು ಕೂಡಾ ಪರಿಶೀಲಿಸಿದ್ದರು. ವಿಮಾನವನ್ನು ಮರಳಿ ನಿಲ್ದಾಣಕ್ಕೆ ತಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಯಿತು.

ಬೆಳಿಗ್ಗೆ 11ಕ್ಕೆ ಮುಂಬೈಗೆ ಹೊರಡಬೇಕಿದ್ದ ವಿಮಾನಯಾನವು ಸಂಜೆ 5ಕ್ಕೆ ಹೊರಟಿತು. ವಿಮಾನದಲ್ಲಿ 186 ಪ್ರಯಾಣಿಕರಿದ್ದರು. ಪ್ರಯಾಣವು 6 ಗಂಟೆ ವಿಳಂಬವಾಗಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ADVERTISEMENT

‘ಪ್ರಯಾಣಿಕನಿಗೆ ಆತನ ಗೆಳತಿ ಕಳುಹಿಸಿದ್ದ ಸಂದೇಶವನ್ನು ಇಣುಕಿದ್ದ ಸಹ ಪ್ರಯಾಣಿಕ, ಅದನ್ನು ತಪ್ಪಾಗಿ ಅರ್ಥೈಸಿದ್ದರಿಂದ ವಿಮಾನನಿಲ್ದಾಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈ ಬಗ್ಗೆ ಯಾರೂ ದೂರು ನೀಡಿಲ್ಲ’ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.