
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ 2026–27ನೇ ಶೈಕ್ಷಣಿಕ ಸಾಲಿನಲ್ಲಿ ಉಚಿತ ಪಠ್ಯಪುಸ್ತಕಗಳನ್ನು ಪೂರೈಸಲು ಶಾಲಾ ಶಿಕ್ಷಣ ಇಲಾಖೆ ₹266.67 ಕೋಟಿ ಮೊತ್ತಕ್ಕೆ ಟೆಂಡರ್ ಕರೆಯಲು ಅನುಮೋದನೆ ನೀಡಿ, ಆದೇಶ ಹೊರಡಿಸಿದೆ.
ಇದೇ ಮೊದಲ ಬಾರಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ಪೂರೈಸಲಾಗುತ್ತಿದ್ದು, ಪಿಯು ಬೇಡಿಕೆ 27.22 ಲಕ್ಷ ಸೇರಿ ಒಟ್ಟು 6.74 ಕೋಟಿ ಪಠ್ಯಪುಸ್ತಕ, ಅಭ್ಯಾಸ, ದಿನಚರಿ ಪುಸ್ತಕಗಳನ್ನು ಮುದ್ರಿಸಲು ಟೆಂಡರ್ ಆಹ್ವಾನಿಸುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಸೂಚಿಸಲಾಗಿದೆ.
ಹಿಂದಿನ ಸಾಲಿನಲ್ಲಿ 9.78 ಲಕ್ಷ ಪಠ್ಯಪುಸ್ತಕ ಹಾಗೂ ಅಭ್ಯಾಸ ಪುಸ್ತಕಗಳು ಉಳಿಕೆಯಾಗಿವೆ. ಅವುಗಳನ್ನು ಪರಿಗಣಿಸಿ ಬೇಡಿಕೆಗೆ ಅನುಗುಣವಾಗಿ ನಿಗದಿಪಡಿಸಿದ ಮೊತ್ತದ ಒಳಗೆ ಮುದ್ರಣ ಕಾರ್ಯ ಕೈಗೊಳ್ಳಬೇಕು. ಮೊತ್ತವನ್ನು ವಿದ್ಯಾವಿಕಾಸ ಯೋಜನೆಯ ಅನುದಾನದಲ್ಲಿ ಭರಿಸಬೇಕು. ರಾಜ್ಯದಲ್ಲಿ ಮುದ್ರಣ ಘಟಕ ಹೊಂದಿರುವ ಮುದ್ರಣಕಾರರಿಗೆ ಟೆಂಡರ್ ನೀಡಬೇಕು. ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯಪುಸ್ತಕಗಳು ಎಲ್ಲ ಶಾಲೆಗಳಿಗೂ ತಲುಪಿಸಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.