ADVERTISEMENT

ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಸೋದರನಿಂದ ಸಂಘ ಪರಿವಾರದ ಮುಖಂಡನಿಗೆ ಜೀವ ಬೆದರಿಕೆ

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಯ ಸೋದರನ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 18:52 IST
Last Updated 10 ಸೆಪ್ಟೆಂಬರ್ 2022, 18:52 IST
ಬೆಳ್ಳಾರೆ ಠಾಣೆಯ ಬಳಿ ಶನಿವಾರ ರಾತ್ರಿ ಸೇರಿರುವ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು
ಬೆಳ್ಳಾರೆ ಠಾಣೆಯ ಬಳಿ ಶನಿವಾರ ರಾತ್ರಿ ಸೇರಿರುವ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು   

ಸುಳ್ಯ: ಬೆಳ್ಳಾರೆ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಶಫೀಕ್ ಸಹೋದರ ಶಾಫ್ರಿದ್ ಎಂಬಾತ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಸಂಘ ಪರಿವಾರದ ಸಂಘಟನೆಯೊಂದರ ಮುಖಂಡ ಬೆಳ್ಳಾರೆ ಗ್ರಾಮದ ಉಮಿಕ್ಕಳದ ಪ್ರಶಾಂತ್ ಪೂಂಜ ಅವರು ಬೆಳ್ಳಾರೆ ಠಾಣೆಗೆ ಶನಿವಾರ ರಾತ್ರಿ ದೂರು ನೀಡಿದ್ದಾರೆ.

‘ಶಾಫ್ರಿದ್ ಶನಿವಾರ ಸಂಜೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ್ದಾನೆ. ಆತನನ್ನು ಠಾಣೆಗೆ ಕರೆಸಿ, ಇನ್ನು ಮುಂದೆ ನನ್ನ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬೆಳ್ಳಾರೆಯ ದೇವಿ ಹೈಟ್ಸ್‌ ಲಾಡ್ಜ್‌ನ ವ್ಯವಸ್ಥಾಪಕರೂ ಆಗಿರುವ ಪ್ರಶಾಂತ್‌ ಪೂಂಜ ಒತ್ತಾಯಿಸಿದ್ದಾರೆ.

ಪ್ರಶಾಂತ್‌ ಪೂಂಜಾ ದೂರು ನೀಡಲು ಬಂದಾಗ ಅವರ ಜೊತೆ ಸಂಘ ಪರಿವಾರದ ಸಂಘಟನೆಗಳ ನೂರಾರು ಕಾರ್ಯಕರ್ತರೂ ಠಾಣೆಯ ಬಳಿ ಜಮಾಯಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಸುಮಾರು ಒಂದು ತಿಂಗಳ ಕಾಲ ಬೆಳ್ಳಾರೆ ಪರಿಸರದಲ್ಲಿ ನಿತ್ಯ ಪೊಲೀಸ್‌ ಬಂದೋಬಸ್ತ್‌ ಮಾಡುವಂತಹ ಪರಿಸ್ಥಿತಿ ಇತ್ತು. ಪಟ್ಟಣವು ಸಹಜ ಸ್ಥಿತಿಗೆ ಬರುತ್ತಿದ್ದಂತೆಯೇ ಮತ್ತೆ ಅಹಿತಕರ ಘಟನೆ ಮರುಕಳಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ದೂರವಾಣಿ ಕರೆ ಮಾಡಿದ ಆರೋಪ ಹೊತ್ತಿರುವ ಶಾಫ್ರಿದ್‌, ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟಾರು ನಡೆಸುತ್ತಿದ್ದ ಅಕ್ಷಯ ಫ್ರೆಷ್‌ ಫಾರ್ಮ್ ಚಿಕನ್‌ ಮಳಿಗೆಯಲ್ಲಿ ಈ ಹಿಂದೆ ಕೆಲಸಕ್ಕಿದ್ದ ಇಬ್ರಾಹಿಂ ಅವರ ಪುತ್ರ.

‘ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಆರೋಪಿ ಶಫೀಕ್‌ ಚಲನವಲನಗಳ ಬಗ್ಗೆ ಪ್ರಶಾಂತ್‌ ಪೂಂಜ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಶಾಂತ್ ಪೂಂಜ ಅವರಿಗೆ ಕರೆ ಮಾಡಿದ್ದ ಶಾಫ್ರಿದ್ ಈ ಬಗ್ಗೆ ಜಗಳವಾಡಿದ್ದ’ ಎಂದು ಸಂಘ ಪರಿವಾರದ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.