ADVERTISEMENT

ಸಿಎಎಯನ್ನು ದಲಿತರು ವಿರೋಧಿಸುತ್ತಿಲ್ಲ: ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 12:54 IST
Last Updated 28 ಜನವರಿ 2020, 12:54 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ದಲಿತರು ವಿರೋಧಿಸುತ್ತಿಲ್ಲ. ಕಾಂಗ್ರೆಸ್‌ನ ಕೆಲ ಬೆಂಬಲಿಗರು ಮುಸ್ಲಿಮರು ಹಾಗೂ ದಲಿತರ ಹಾದಿ ತಪ್ಪಿಸಿ ಹೋರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿಎಎ ವಿರುದ್ಧ ಕಾಂಗ್ರೆಸ್‌, ಮಮತಾ ಬ್ಯಾನರ್ಜಿ, ಅರವಿಂದ್‌ ಕೇಜ್ರಿವಾಲ್‌ ಅಂಡ್‌ ಕಂಪನಿ ಜನರ ದಾರಿ ತಪ್ಪಿಸುತ್ತಿದೆ. ದೇಶದಲ್ಲಿ ದಲಿತರೇ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಹಾಗೂ ಶಾಸಕರಿದ್ದಾರೆ’ ಎಂದರು.

‘ಸಿಎಎ ವಿರುದ್ಧದ ಹೋರಾಟಗಳಿಗೆ ವಿದೇಶದಿಂದ ಹಣ ಬರುತ್ತಿದೆ ಎನ್ನುವುದು ಆತಂಕಕಾಗಿ ಬೆಳವಣಿಗೆ. ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ರೀತಿಯಲ್ಲಿ ನಡೆದಿರುವ ಬೆಳವಣಿಗೆ ಕೂಡ ಅಪಾಯಕಾರಿ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಸಹಿಸಲಾಗದೆ ಕಾಂಗ್ರೆಸ್‌ ವಿಧ್ವಂಸಕ ರಾಜಕೀಯ ಮಾಡುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಸಿಎಎನಿಂದ ಭಾರತದಲ್ಲಿ ನೆಲೆಸಿರುವ ಜನರಿಗೆ ತೊಂದರೆಯಾಗುತ್ತದೆ ಎಂದು ಎಲ್ಲಿ ಹೇಳಲಾಗಿದೆ? ತ್ರಿವಳಿ ತಲಾಕ್‌, 370ನೇ ವಿಧಿ ರದ್ದತಿ ಬಳಿಕ ಕಾಂಗ್ರೆಸ್‌ ಹಾಗೂ ಪಾಕಿಸ್ತಾನ ಒಂದೇ ರೀತಿಯಾಗಿ ಹೇಳಿಕೆ ನೀಡುತ್ತಿವೆ. 370ನೇ ವಿಧಿ ರದ್ದು ಮಾಡುವ ಮೊದಲು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್‌ಗಳ ಮೂಲಕ ಭಯೋತ್ಪಾದಕರಿಗೆ ಹಣ ಸಂದಾಯವಾಗುತ್ತಿತ್ತು. ಜನಪ್ರಿಯತೆ ಸಹಿಸದೇ ಮೋದಿ ಅವರನ್ನು ಮತ್ತು ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್‌ ದೇಶವನ್ನೇ ವಿರೋಧಿಸುತ್ತಿದೆ’ ಎಂದರು.

ಯಡಿಯೂರಪ್ಪ ಬಗ್ಗೆ ಅಪಾರ ಗೌರವ:ರಾಜ್ಯದಲ್ಲಿ ಪಕ್ಷಕ್ಕೆ ನೆಲೆ ಒದಗಿಸಿಕೊಟ್ಟ ಯಡಿಯೂರಪ್ಪ ಅವರ ಬಗ್ಗೆ ರಾಷ್ಟ್ರೀಯ ನಾಯಕರಿಗೆ ಅಪಾರ ಗೌರವವಿದೆ. ಈ ಬಗ್ಗೆ ಯಾವುದೇ ಉಹಾಪೋಹ ನಿಜವಲ್ಲ ಎಂದರು.

ಹಿರಿಯ ಸಚಿವರು ಸ್ಥಾನ ತ್ಯಾಗ ಮಾಡಬೇಕು ಎನ್ನುವ ಯತ್ನಾಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ‘‍ಪಕ್ಷದಲ್ಲಿ ಯಾರಿಗೆ ಏನು ಕೆಲಸ ಕೊಡಬೇಕು ಎನ್ನುವುದು ಯಡಿಯೂರಪ್ಪ ಅವರಿಗೆ ಗೊತ್ತಿದೆ. ಅದನ್ನು ಅವರು ತೀರ್ಮಾನಿಸುತ್ತಾರೆ. ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿಗೆ ಯಾವುದೇ ಗೊಂದಲವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.