ADVERTISEMENT

ಎಚ್‌.ಡಿ.ಕುಮಾರಸ್ವಾಮಿ ವಿರುದ್ದ ಕ್ರಮಕ್ಕೆ ‘ಸಂಪುಟ’ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 22:23 IST
Last Updated 22 ಆಗಸ್ಟ್ 2024, 22:23 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಶಾಸಕರಾದ ಶಶಿಕಲಾ ಜೊಲ್ಲೆ, ಜಿ. ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಮೇಲಿನ ಪ್ರಕರಣಗಳ ಸಂಬಂಧ ಶೀಘ್ರವೇ ‘ಅನುಮೋದನೆ’ ಮತ್ತು ‘ಪೂರ್ವಾನುಮತಿ’ ನೀಡಬೇಕು ಎಂದು ರಾಜ್ಯಪಾಲರಿಗೆ ಸಲಹೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ, ರಾಜ್ಯಪಾಲರ ಬಳಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಕೆಲವು ಪ್ರಕರಣಗಳು ಲೋಕಾಯುಕ್ತರಿಂದ ಹೋಗಿವೆ. ಇನ್ನೂ ಕೆಲವು ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳಿಂದ ವರದಿಗಳೂ ಸಲ್ಲಿಕೆಯಾಗಿವೆ. ಕುಮಾರಸ್ವಾಮಿ ಮತ್ತು ಜನಾರ್ದನ ರೆಡ್ಡಿ ಅವರ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಯೂ ಸಿದ್ಧವಾಗಿದೆ. ಅದರ ಸಲ್ಲಿಕೆಗೆ ರಾಜ್ಯಪಾಲರ ಒಪ್ಪಿಗೆ ಬೇಕಿದೆ ಎಂದರು.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ 19ರಡಿ ಅನುಮೋದನೆ ಮತ್ತು ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಬಾಕಿ ಇವೆ. ಈ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲು ಸಂವಿಧಾನದ 163ನೇ ವಿಧಿ ಅನ್ವಯ ಸಲಹೆ ನೀಡಲು ನಿರ್ಣಯಿಸಲಾಯಿತು ಎಂದರು.

ADVERTISEMENT

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ, ‘ರಾಜ್ಯಪಾಲರ ವಿವೇಚನಾಧಿಕಾರ ಸೀಮಿತ’ ಎಂದೂ ಹೇಳಿದರು.

‘ಸಿದ್ದರಾಮಯ್ಯ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದಾಗ ರಾಜ್ಯಪಾಲರು ತರಾತುರಿಯಲ್ಲಿ ಶೋಕಾಸ್‌ ನೋಟಿಸ್‌ ನೀಡಿದರು. ಆದರೆ, ಕುಮಾರಸ್ವಾಮಿ, ಜೊಲ್ಲೆ, ನಿರಾಣಿ ಮತ್ತು ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಯಾವುದೇ ಕ್ರಮ ಆಗಿಲ್ಲ. ಸಂಪುಟದ ತೀರ್ಮಾನದಲ್ಲಿ ದ್ವೇಷದ ರಾಜಕಾರಣ ಇಲ್ಲ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.