ADVERTISEMENT

ಭೂಸ್ವಾಧೀನ ವೆಚ್ಚವನ್ನು ಭರಿಸಲಿದೆ ಕೇಂದ್ರ ಸರ್ಕಾರ

ಎಸ್‌ಟಿಆರ್‌ಆರ್‌ ಮೊದಲ ಹಂತ: ಕೇಂದ್ರ ಸಚಿವ ಗಡ್ಕರಿ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 20:30 IST
Last Updated 10 ಡಿಸೆಂಬರ್ 2019, 20:30 IST
   

ಬೆಂಗಳೂರು: ‘ಬೆಂಗಳೂರು ಸುತ್ತಮುತ್ತಲಿನ ಪ್ರಮುಖ ನಗರ, ಪಟ್ಟಣಗಳನ್ನು ಸಂ‍ಪರ್ಕಿಸುವಉಪನಗರ ಹೊರ ವರ್ತುಲ ರಸ್ತೆ (ಎಸ್‌ಟಿಆರ್‌ಆರ್‌) ನಿರ್ಮಾಣ ಕಾರ್ಯ ಈಗಾಗಲೇ ಆರಂಭ ವಾಗಿದ್ದು, ಮೊದಲ ಹಂತದ ಭೂಸ್ವಾಧೀನಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ’ ಎಂದು ಕೇಂದ್ರ ಭೂ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

‘ಈ ಯೋಜನೆಯಲ್ಲಿ ಉಳಿದ ಹಂತಗಳ ಭೂಸ್ವಾಧೀನಕ್ಕೆತಗಲುವ ವೆಚ್ಚದಲ್ಲಿ ಶೇ 25ರಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಪ್ರಸ್ತುತ ಲಭ್ಯವಿರುವ ಸರ್ಕಾರಿ ಭೂಮಿಯನ್ನು ತಕ್ಷಣ ಹಸ್ತಾಂತರ ಮಾಡಿದರೆ ಕಾಮ ಗಾರಿಯನ್ನು ಮತ್ತಷ್ಟು ತ್ವರಿತಗೊಳಿಸಲು ಸಹಕಾರಿಯಾಗಲಿದೆ’ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು. ಪ್ರಗತಿ ಹಂತದಲ್ಲಿ ಇರುವ ಯೋಜನೆಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಉಪನಗರ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಬಳಸುವ ಮರಳು ಹಾಗೂ ಕಲ್ಲಿಗೆ ರಾಯಧನದಿಂದ ವಿನಾಯಿತಿ ನೀಡಬೇಕು. ಕಬ್ಬಿಣ, ಸಿಮೆಂಟ್‌ಗೆ ಜಿಎಸ್‌ಟಿಯಿಂದ ವಿನಾಯಿತಿ ಕೊಡಬೇಕು. ತೆರಿಗೆ ವಿನಾಯಿತಿ ಮೊತ್ತವನ್ನು ರಾಜ್ಯ ಸರ್ಕಾರದ ವಂತಿಗೆ ಲೆಕ್ಕಕ್ಕೆ ಸೇರಿಸಿಕೊಳ್ಳಲಾಗುವುದು. ಇದರಿಂದ ಅಡೆತಡೆಗಳಿಲ್ಲದೆ ಕಾಮಗಾರಿಗಳನ್ನು ಮುಂದುವರಿಸಲು ಸಹಕಾರಿಯಾಗಲಿದೆ ಎಂದು ಗಡ್ಕರಿ ಹೇಳಿದರು.

‘ರಾಜ್ಯದಲ್ಲಿ ₹50 ಸಾವಿರ ಕೋಟಿ ವೆಚ್ಚದಲ್ಲಿ 2,300 ಕಿ.ಮೀ ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸುವ ಯೋಜನೆಗೆ ವಿಸ್ತೃತ ಯೊಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಇದರ ಶೇ 80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಪರಿ ಸರ ಸಚಿವಾಲಯದ ಅನುಮತಿ ಪಡೆದು ಕೊಂಡ ನಂತರ ಕಾಮಗಾರಿ ಕೈಗೆತ್ತಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಮುಂದಿನ 5 ವರ್ಷ ಗಳಲ್ಲಿ ಒಟ್ಟಾರೆ ₹1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಜಾರಿ ಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.