ADVERTISEMENT

ಗೋವಾ–ತಮ್ನಾರ್ ಯೋಜನೆಗೆ ಕೇಂದ್ರ ಮೀನಮೇಷ, ಆದರೆ, ಕರ್ನಾಟಕ ರಾಜ್ಯ ಅತ್ಯುತ್ಸಾಹ!

ಮಂಜುನಾಥ್ ಹೆಬ್ಬಾರ್‌
Published 22 ಜೂನ್ 2025, 1:25 IST
Last Updated 22 ಜೂನ್ 2025, 1:25 IST
<div class="paragraphs"><p>ಕಾಳಿ ಹುಲಿ ಅಭಯಾರಣ್ಯ</p></div>

ಕಾಳಿ ಹುಲಿ ಅಭಯಾರಣ್ಯ

   

ನವದೆಹಲಿ: ಮಹದಾಯಿ ಯೋಜನೆಗೆ ವನ್ಯಜೀವಿ ಅನುಮೋದನೆ ನೀಡಲು ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿದ್ದರೆ, ಕರ್ನಾಟಕದ 177 ಹೆಕ್ಟೇರ್ ಕಾಡು ನಾಶವಾಗುವ ಗೋವಾ–ತಮ್ನಾರ್‌ ಯೋಜನೆಗೆ ಅನುಮೋದನೆ ನೀಡಲು ರಾಜ್ಯ ಸರ್ಕಾರ ಅತ್ಯುತ್ಸಾಹ ತೋರಿದೆ. 

ಗೋವಾ–ತಮ್ನಾರ್ 400 ಕೆ.ವಿ.ವಿದ್ಯುತ್‌ ಮಾರ್ಗವು ಬೆಳಗಾವಿ ವೃತ್ತದ ಹಾಗೂ ಕಾಳಿ ಹುಲಿ ಅಭಯಾರಣ್ಯದ ಧಾರವಾಡ, ಹಳಿಯಾಳ ಮತ್ತು ದಾಂಡೇಲಿ ವೃತ್ತದ 24 ಗ್ರಾಮಗಳ 177 ಹೆಕ್ಟೇರ್ ಅರಣ್ಯದ ಮೂಲಕ ಹಾದು ಹೋಗಲಿದೆ. ಪರ್ಯಾಯ ಮಾರ್ಗ ಅಥವಾ ಕಡಿಮೆ ಮರಗಳ ಹನನವಾಗುವ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಅರಣ್ಯ ಇಲಾಖೆ ಮಾರ್ಚ್‌ ತಿಂಗಳಲ್ಲಿ ಸೂಚಿಸಿತ್ತು. ಪರ್ಯಾಯ ಮಾರ್ಗದ ಪರಿಷ್ಕೃತ ಪ್ರಸ್ತಾವ ಸಲ್ಲಿಸುವಂತೆ ಬೆಳಗಾವಿ, ಧಾರವಾಡ ಹಾಗೂ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ನೋಡಲ್‌ ಅಧಿಕಾರಿ) ಮಹೇಶ್‌ ಬಸವರಾಜ್ ಶಿರೂರು ಇದೇ 10ರಂದು ತಾಕೀತು ಮಾಡಿದ್ದಾರೆ. 

ADVERTISEMENT

ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದ ಕಾರಣಕ್ಕೆ ಮಹದಾಯಿ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 79ನೇ ಸಭೆಯಲ್ಲಿ (2024ರ ಜುಲೈ 31) ಒಪ್ಪಿಗೆ ನೀಡಿರಲಿಲ್ಲ. ಅದೇ ಸಭೆಯಲ್ಲಿ, ಗೋವಾ–ತಮ್ನಾರ್‌ ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಅದರ ಬೆನ್ನಲ್ಲೇ, ಮಹದಾಯಿ ಯೋಜನೆಗೆ ಒಪ್ಪಿಗೆ ಕೊಟ್ಟರೆ ಮಾತ್ರ ಗೋವಾ–ತಮ್ನಾರ್‌ ಯೋಜನೆಗೆ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟಪಡಿಸಿದ್ದರು. ಗೋವಾ–ತಮ್ನಾರ್‌ ಯೋಜನೆಯು ರಾಷ್ಟ್ರೀಯ ವಿತರಣಾ ಜಾಲದ ಯೋಜನೆಯಾಗಿದ್ದು, ರಾಜ್ಯ ಸರ್ಕಾರ ಅಡ್ಡಿಪಡಿಸುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಇಂಧನ ಸಚಿವರು ರಾಜ್ಯಕ್ಕೆ ಪತ್ರ ಬರೆದಿದ್ದರು. ಕೇಂದ್ರದ ಒತ್ತಡಕ್ಕೆ ಮಣಿದಿರುವ ರಾಜ್ಯವು ತನ್ನ ನಿಲುವು ಬದಲಿಸಿದೆ. 

2024ರ ಅಕ್ಟೋಬರ್‌ 9, ಡಿಸೆಂಬರ್‌ 21, 2025ರ ಮಾರ್ಚ್‌ 12 ಹಾಗೂ ಏಪ್ರಿಲ್‌ 22ರಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಭೆ ನಡೆದಿದೆ. ಅಕ್ಟೋಬರ್‌ನಲ್ಲಿ ನಡೆದ ಸ್ಥಾಯಿ ಸಮಿತಿಯ 80ನೇ ಸಭೆಯಲ್ಲಿ ಈ ಯೋಜನೆ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಲಿಖಿತ ಪ್ರತಿಕ್ರಿಯೆ ಕೇಳಲಾಗಿತ್ತು. ಆ ಬಳಿಕ ನಡೆದ ಮೂರು ಸಭೆಗಳಲ್ಲೂ ಮಹದಾಯಿ ಯೋಜನೆಯು ಕಾರ್ಯಸೂಚಿಯಲ್ಲಿ ಇರಲೇ ಇಲ್ಲ. ಮಾರ್ಚ್‌ 12ರಂದು ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಹಾಜರಾಗಿದ್ದರು. ಅಲ್ಲೂ ಚರ್ಚೆಗೆ ಬಂದಿರಲಿಲ್ಲ. 

ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 10.68 ಹೆಕ್ಟೇರ್ ಅರಣ್ಯ ಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.