ADVERTISEMENT

ಆರ್‌ಎಸ್‌ಎಸ್‌ ಹಾಗೂ ಕಾಂಗ್ರೆಸ್‌ ದೇಶ ಒಡೆಯುವ ಕೆಲಸ ಮಾಡುತ್ತಿವೆ: ದೇವೇಗೌಡ

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 12:37 IST
Last Updated 23 ಅಕ್ಟೋಬರ್ 2021, 12:37 IST
ಆಲಮೇಲ ಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು
ಆಲಮೇಲ ಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು   

ಆಲಮೇಲ(ವಿಜಯಪುರ): ಗಾಂಧಿ ಕಾಂಗ್ರೆಸ್ ಮತ್ತು ಹೆಡಗೇವಾರ್‌ ಆರ್‌ಎಸ್ಎಸ್ ಸಂಘಟನೆ ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿದ್ದವು. ಆದರೆ, ಇಂದಿನ ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್ ಧರ್ಮ, ಧರ್ಮಗಳ ನಡುವೆ ಕೋಮು ಸಂಘರ್ಷಹುಟ್ಟುಹಾಕಿ ದೇಶ ಒಡೆಯವ ಕೆಲಸದಲ್ಲಿ ತೊಡಗಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆರೋಪಿಸಿದರು.

ಆಲಮೇಲ ವಿರಕ್ತಮಠದಲ್ಲಿಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಮೇಲ್ನೋಟಕ್ಕೆ ಅಹಿಂದ ಜಪ ಮಾಡುತ್ತಿದೆ. ಅಲ್ಪಸಂಖ್ಯಾತರ ಹಾಗೂ ದಲಿತರ ಕುರಿತು ಕಾಳಜಿ ಇಲ್ಲ ಎಂದು ಆರೋಪಿಸಿದರು.

ADVERTISEMENT

‘ನಾನು ಪ್ರಧಾನಿ ಆದಾಗ ದೇಶದಲ್ಲಿ ಒಂದೇ ಒಂದು ಕೋಮು ಸಂಘರ್ಷ ಆಗಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ’ ಎಂದರು.

135 ವರ್ಷಗಳ ಹಳೆಯ ಕಾಂಗ್ರೆಸ್ ಇಂದು ಯಾವ ಸ್ಥಿತಿಯಲ್ಲಿದೆ?ಅದಕ್ಕೆ ಏನು ಕಾರಣ? ಎಂಬುದರ ಬಗ್ಗೆ ಕಾಂಗ್ರೆಸ್‌ನವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಂದಿನ ಕಾಂಗ್ರೆಸ್ ಪಕ್ಷದ ಯಾವುದೇ ಸಿದ್ಧಾಂತಗಳು ಇಂದು ಉಳಿದಿಲ್ಲ. ಅದೊಂದು ಅವನತಿ ಹೊಂದುತ್ತಿರುವ ಪಕ್ಷ. ಅದಕ್ಕೆ ಯಾವುದೇ ಮಾನ್ಯತೆ ಇಲ್ಲ. ಕಾಂಗ್ರೆಸ್ ಪಕ್ಷ ಏನಿದ್ದರೂ ಸಿದ್ದರಾಮಯ್ಯ ಅವರ ಸಿದ್ಧಾಂತ ಅವನತಿ ಹೊಂದಲಿದೆ ಎಂದರು.

2018ರಲ್ಲಿ ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಈ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶವನ್ನು ತಪ್ಪಿಸಿದ್ದೇಸಿದ್ದರಾಮಯ್ಯ. ಕಾಂಗ್ರೆಸ್ ಅವನತಿಗೆ ಸಿದ್ದರಾಮಯ್ಯ ಅವರ ಬಳುವಳಿ ಇದೆ ಎಂದು ಹೇಳಿದರು.

ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡುತ್ತಿದೆ. ಬಿಜೆಪಿ ’ಬಿ‘ ಟೀಂ ಆಗಿ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದರು.

‘ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರನ್ನು ನಾಯಕನನ್ನಾಗಿ ಬೆಳೆಸುವುದಿಲ್ಲ. ಬೇರೊಂದು ಪಕ್ಷದಲ್ಲಿ ಬೆಳೆದವರನ್ನು ಕರೆದೊಯ್ಯುವುದೇ ಅದರ ಸಾಧನೆ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಜೆಡಿಎಸ್ ಪಕ್ಷದಿಂದ ಬೆಳೆದು ಹೋದವರೇ ಹೆಚ್ಚಿದ್ದಾರೆ. ಅವರದೇ ದರ್ಬಾರ್ ನಡೆಯುತಿದೆ. ಸಿದ್ದರಾಮಯ್ಯ, ಜಮೀರ್ ನಮ್ಮ ಪಕ್ಷದಿಂದಲೆ ಬೆಳೆದು ಹೋದವರು. ಪಕ್ಷದ ಯಾವುದೇ ಸಿದ್ಧಾಂತಗಳು ಅವರಿಗೆ ಮುಖ್ಯವಲ್ಲ. ಅವರ ಸಿದ್ಧಾಂತಗಳು ಮಾತ್ರ ಮುಖ್ಯ’ ಎಂದು ಆರೋಪಿಸಿದರು.

ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳು ಇಲ್ಲದರಿಂದ ಜೆಡಿಎಸ್ ಪಕ್ಷದವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ರಾಜ್ಯದ ಎಲ್ಲ ಕಡೆಯೂ ಇದೆ ಪರಸ್ಥಿತಿ ಇದೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮಾಜಿ ಶಾಸಕ ಬಿ.ಜಿ.ಪಾಟೀಲ ಹಲಸಂಗಿ, ಸಲೀಂ ಜುಮನಾಳ, ನೂರಹ್ಮದ್ ನಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.