ADVERTISEMENT

ಕುಟುಂಬದ ಆಧಾರವೇ ಕಳಚಿ ಬಿದ್ದಿದೆ...

ಪೊಲೀಸ್ ಗುಂಡೇಟಿಗೆ ಬಲಿಯಾದ ಜಲೀಲ್ ಮನೆಯವರ ದುಃಖದ ಮಾತು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 1:52 IST
Last Updated 22 ಡಿಸೆಂಬರ್ 2019, 1:52 IST
ನೌಸೀನ್‌ - ಅಬ್ದುಲ್ ಜಲೀಲ್
ನೌಸೀನ್‌ - ಅಬ್ದುಲ್ ಜಲೀಲ್   

ಮಂಗಳೂರು: ‘ಮಗಳು ಶಿಫಾನಿ (14 ವರ್ಷ) ಒಂಬತ್ತನೇ ತರಗತಿ. ಮಗ ಶಬೀಲ್ (9 ವರ್ಷ) ಐದನೇ ತರಗತಿ. ಇಬ್ಬರನ್ನೂ ಓದಿಸಿ, ದೇಶದ ಉತ್ತಮ ಪೌರರಾಗಿ ರೂಪಿಸುವ ಕನಸು ಅವರದ್ದಾಗಿತ್ತು. ಅದಕ್ಕಾಗಿ ಬಡತನದಲ್ಲೂ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಸೇರಿಸಿದ್ದರು...’

ಪೌರತ್ವ (ತಿದ್ದುಪಡಿ) ಕಾಯ್ದೆಯ ಹೋರಾಟದ ಸಂದರ್ಭದಲ್ಲಿಪೊಲೀಸರ ಗುಂಡಿಗೆ ಬಲಿಯಾದ ಬಂದರಿನ ಕಂದಕ್‌ನ ಅಬ್ದುಲ್ ಜಲೀಲ್ ಮನೆಯವರು ಹೇಳುವಾಗ ದುಃಖ ಕಟ್ಟೆಯೊಡೆದಿತ್ತು.

‘ಮೀನು ಮಾರಾಟ ಮಾಡುತ್ತಿದ್ದ ಜಲೀಲ್‌, ಬಾಡಿಗೆಮನೆಯಲ್ಲಿ ವಾಸವಿದ್ದರು. ಅಂದೂ (ಗುರುವಾರ) ಹೊರಗಿನ ಗದ್ದಲ ಕಂಡ ಅವರು, ಮಕ್ಕಳನ್ನು ಮನೆಗೆ ಕಳುಹಿಸಿ ಹೊರಗೆ ಬರುತ್ತಿದ್ದರು. ಪೊಲೀಸರು...’ ಎಂದು ಅಕ್ಕನ ಮಗ ನಜೀರ್ ಹೇಳುತ್ತಿದ್ದಂತೆ ಕಣ್ಣಾಲಿಗಳು ತುಂಬಿದವು.

ADVERTISEMENT

‘ದಿನದಲ್ಲಿ ₹100 ಸಂಪಾದಿಸಿದರೆ, ₹ 50 ಮಕ್ಕಳ ಶಿಕ್ಷಣಕ್ಕೆ, ₹40 ಮನೆಗೆ ಹಾಗೂ ₹10 ಮಾತ್ರ ತನಗೆ ಎಂಬ ದಿನಚರಿ ಅವರದ್ದು. ಈಗ ಕುಟುಂಬದ ಆಧಾರವೇ ಕಳಚಿ ಬಿದ್ದಿದೆ?’ ಎಂದು ಅಣ್ಣಂದಿರು ಗದ್ಗದಿತರಾದರು.

‘ಎರಡನೇ ಮಹಡಿಯಲ್ಲಿದ್ದ ಪತ್ನಿ, ಮಕ್ಕಳ ಕಣ್ಣೆದುರೇ ಅವರ ಮೇಲೆ ಗುಂಡು ಹಾರಿಸಿದರು. ಎಲ್ಲವನ್ನೂ ದೇವರು ನೋಡುತ್ತಾನೆ’ ಎಂದು ಅಣ್ಣ ಬಶೀರ್ ಮೌನವಾದರು.

ಅಮ್ಮನ ನೋವನ್ನು ಅಲ್ಲಾ ನೋಡುತ್ತಿದ್ದಾರೆ...: ‘ಅಂದು ಮಧ್ಯಾಹ್ನವೂ ಮನೆಗೆ ಬಂದಿದ್ದ ನೌಸೀನ್‌, ಮತ್ತೆ ಬರುವುದಿಲ್ಲ ಎಂಬ ಕನಸೂ ಇರಲಿಲ್ಲ. ಅಮ್ಮನ ನೋವನ್ನು ಅಲ್ಲಾ ನೋಡುತ್ತಿದ್ದಾರೆ. ಎಲ್ಲವನ್ನೂ ನಿರ್ಧರಿಸುತ್ತಾರೆ’ ಎಂದು ಕುದ್ರೋಳಿಯ ನೌಸೀನ್ ಸಹೋದರ ನೌಫಲ್ ಕಣ್ಣೀರಾದರು.

‘ಆತ ಕಲಿಕೆ, ಇತರ ಚಟುವಟಿಕೆಗಳಲ್ಲಿ ಚುರುಕಾಗಿ ಇರಲಿಲ್ಲ. ಆದ್ದರಿಂದಲೇ ಕೆಲಸ ಬಿಟ್ಟು ಬಂದರಿನಲ್ಲಿ ವೆಲ್ಡಿಂಗ್‌ಗೆ ಸೇರಿದ್ದ. ಬಂದರು ಪ್ರದೇಶದಲ್ಲಿ ಗಲಾಟೆಯನ್ನು ಕಂಡ ಆತನ ಮಾಲೀಕರು, ಮನೆಗೆ ತೆರಳುವಂತೆ ತಿಳಿಸಿದ್ದರು. ಅದರಿಂದಾಗಿಬೇಗ ಹೊರಟಿದ್ದ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.