ADVERTISEMENT

ಸೋಮವಾರ ಬಂದಿಳಿಯಲಿದೆ 240 ಕನ್ನಡಿಗರನ್ನು ಹೊತ್ತು ಲಂಡನ್‌ನಿಂದ ಹೊರಟ ಮೊದಲ ವಿಮಾನ

​ಪ್ರಜಾವಾಣಿ ವಾರ್ತೆ
Published 10 ಮೇ 2020, 11:52 IST
Last Updated 10 ಮೇ 2020, 11:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಿದೇಶಗಳಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ 240 ಕನ್ನಡಿಗರನ್ನು ಹೊತ್ತ ಮೊದಲ ಏರ್‌ ಇಂಡಿಯಾ ವಿಮಾನ ಲಂಡನ್‌ನಿಂದ ಹೊರಟು ಸೋಮವಾರ (ಮೇ 11) ನಸುಕಿನ 3 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.

ಮೊದಲ ವಿಮಾನದಲ್ಲಿ ಬರುವ ಬಹುತೇಕ ಪ್ರಯಾಣಿಕರು ಅನಾರೋಗ್ಯ ಕಾರಣದಿಂದ ತುರ್ತಾಗಿ ತಾಯ್ನಾಡಿಗೆ ಬರುವವರು. ಅಂಥವರ ಪ್ರಯಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ ಗೆ ತಿಳಿಸಿವೆ.

ಲಂಡನ್‌ನಲ್ಲಿ 58 ದಿನಗಳ ಹಿಂದೆ ಮೃತಪಟ್ಟ ಸಾಫ್ಟ್‌ವೇರ್‌ ಎಂಜಿನಿಯರ್‌ ಹುಬ್ಬಳ್ಳಿಯ ಶಿವರಾಜ ಗದೆಗೆಪ್ಪಗೌಡ ಪಾಟೀಲ ಅವರ ಪಾರ್ಥಿವ ಶರೀರವನ್ನೂ ಇದೇ ವಿಮಾನದಲ್ಲಿ ತರಲಾಗುತ್ತಿದೆ. ಪಾಟೀಲ ಅವರ ಪತ್ನಿ ಶಿವಲೀಲಾ ಪಾಟೀಲ ಮತ್ತು ಪುತ್ರ ಶಿವಾಂಗ ಪಾಟೀಲ ಈ ವಿಮಾನದಲ್ಲಿದ್ದಾರೆ.

ADVERTISEMENT

ಉಳಿದಂತೆ, ಬಾವ ಮೃತಪಟ್ಟ ಕಾರಣಕ್ಕೆ ಸಂತೋಷ್‌, ಗಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಕಾರಣಕ್ಕೆ ಜಯಲಕ್ಷ್ಮಿ ಸೋಮನಹಳ್ಳಿ, ಕಿರು ಅವಧಿಯ ಕೋರ್ಸ್‌ಗೆ ಹೋಗಿದ್ದ ವಿದ್ಯಾರ್ಥಿಗಳಾದ ರಾಮಕೃಷ್ಣ, ಅನುಷಾ, ಸಾಯಿ ಸ್ಕಂದಾ, ಅನುಪಮಾ, ಲಂಡನ್‌ಗೆ ಪ್ರವಾಸಕ್ಕೆ ತೆರಳಿ ಸಿಲುಕಿದ್ದ ಅಖಿಲ್‌ ನಾರಾಯಣ ಮತ್ತಿತರರು ಈ ವಿಮಾನದಲ್ಲಿದ್ದಾರೆ.

ಅಲ್ಲದೆ, ಕಾಂಗ್ರೆಸ್‌ ಶಾಸಕಿ ಜಯಮಾಲಾ ಅವರ ಮಗಳು ಸೌಂದರ್ಯಾ ಕೂಡಾ ಇದೇ ವಿಮಾನದಲ್ಲಿ ತಾಯ್ನಾಡಿಗೆ ಮರಳುತ್ತಿದ್ದಾರೆ. ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಭಾರತಕ್ಕೆ ಮರಳಲು ಲಂಡನ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸೌಂದರ್ಯಾ ಅಲ್ಲಿ ಸಿಲುಕಿಕೊಂಡಿದ್ದರು ಎಂದೂ ಮೂಲಗಳು ತಿಳಿಸಿವೆ.

ಎರಡನೇ ವಿಮಾನ ಮೇ 12ರಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬರಲಿದೆ. ದುಬೈಯಿಂದ 200 ಕನ್ನಡಿಗರನ್ನು ಹೊತ್ತ ವಿಮಾನ ಅಲ್ಲಿಗೆ ಬರಲಿದೆ. ಕೇಂದ್ರ ಸರ್ಕಾರದ ‘ವಂದೇ ಭಾರತ್‌ ಮಿಷನ್‌‘ ಯೋಜನೆಯಡಿ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆದುಕೊಂಡು ಬರಲಾಗುತ್ತಿದೆ.

ಕನ್ನಡಿಗರ ಮೊದಲ ತಂಡವನ್ನು ಸ್ವಾಗತಿಸಲು ಮತ್ತು ಪ್ರಯಾಣಿಕರ ಸಂಪೂರ್ಣ ಪರೀಕ್ಷೆ, ಸ್ಕ್ರೀನಿಂಗ್ ವ್ಯವಸ್ಥೆಗಳ ಪರಿಶೀಲನೆ ನಡೆಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಸೋಮವಾರ ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.