ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆಗೆ ಅಡೆತಡೆ ಇಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 19:52 IST
Last Updated 24 ಸೆಪ್ಟೆಂಬರ್ 2020, 19:52 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ರಾಜ್ಯದ 5,800 ಗ್ರಾಮ ಪಂಚಾಯಿತಿಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲು ಯಾವುದೇ ಅಡೆತಡೆಗಳಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿ ಮೇ 28ರಲ್ಲಿ ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿವಿಧಾನ ಪರಿಷತ್ತಿನ ಸದಸ್ಯ ಕೆ.ಸಿ. ಕೊಂಡಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಅಂತಿಮ ಮತದಾರರ ಪಟ್ಟಿ ಮತ್ತು ಮೀಸಲಾತಿ ಅಧಿಸೂಚನೆಗಳನ್ನು ಆಗಸ್ಟ್‌ನಲ್ಲಿ ಪ್ರಕಟಿಸಲಾಗಿದೆ. ದಿನಾಂಕ ನಿಗದಿಗೂ ಮುನ್ನ ಪೂರ್ವ ತಯಾರಿಗೆ ಸಮಯ ಬೇಕು’ ಎಂದು ಆಯೋಗ ಮನವಿ ಮಾಡಿತು. ‘ಈಗಾಗಲೇ ಸಮಯ ಮೀರಿದೆ’ ಎಂದು ಪೀಠ ಹೇಳಿತು.

ADVERTISEMENT

‘ಚುನಾವಣೆ ನಡೆಸಲು₹250 ಕೋಟಿಯನ್ನು ಆಯೋಗ ಕೇಳಿದೆ. ಇದರಲ್ಲಿ ₹125 ಕೋಟಿ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ’ ಎಂದು ರಾಜ್ಯ ಸರ್ಕಾರ ವಿವರ ನೀಡಿತು.ಅಗತ್ಯ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು. ವಿಚಾರಣೆಯನ್ನ ಅಕ್ಟೋಬರ್ 9ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.