ಬೆಂಗಳೂರು: ಪ್ರಯಾಣಿಕರಿಗೆ ಟಿಕೆಟ್ ನೀಡದ ಆರೋಪದಡಿ ಕಂಡಕ್ಟರ್ ಒಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಈ ಸಂಬಂಧ ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಸಿಬ್ಬಂದಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಅವರ ಹಿಂದಿನ ನಡವಳಿಕೆಯನ್ನೂ ಪರಿಗಣಿಸಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣವೇನು?: ಕಂಡಕ್ಟರ್ ಎನ್.ಎನ್.ಮಹಾದೇವ, ಗೋಣಿಕೊಪ್ಪದಿಂದ ಬಿ.ಶೆಟ್ಟಿಗೇರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ 2013ರ ಜನವರಿ 23ರಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅವರು ಮೂವರು ಪ್ರಯಾಣಿಕರಿಗೆ ಟಿಕೆಟ್ ನೀಡದೇ ಇರುವುದನ್ನು ತಪಾಸಣಾ ತಂಡ ಪತ್ತೆ ಹಚ್ಚಿತ್ತು.
ಈ ಕುರಿತು ಇಲಾಖಾ ತನಿಖೆ ನಡೆಸಲಾಗಿತ್ತು. ಕರ್ತವ್ಯ ಲೋಪ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಮಹಾದೇವ ಇದನ್ನು ಮೈಸೂರಿನ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಕಾರ್ಮಿಕ ನ್ಯಾಯಾಲಯವು ವಜಾ ಆದೇಶವನ್ನು 2017ರಲ್ಲಿ ರದ್ದುಪಡಿಸಿತ್ತು. ‘ಎರಡು ವೇತನ ಹೆಚ್ಚಳವನ್ನು ಸ್ಥಗಿತಗೊಳಿಸಬೇಕು’ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ‘ಮಹಾದೇವ ಅವರು ಈ ಹಿಂದೆ ಇಂತಹ 122 ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ಕಂಡು ಬಂದಿದೆ. ಇದನ್ನು ಕೆಎಸ್‌ಆರ್‌ಟಿಸಿಯ ಶಿಸ್ತು ಸಮಿತಿ ಪರಿಗಣಿಸಿಯೇ ಸೇವೆಯಿಂದ ವಜಾ ಮಾಡುವಂತೆ ಆದೇಶಿಸಿದೆ. ಆದ್ದರಿಂದ, ವಜಾ ಆದೇಶವನ್ನು ಕಾರ್ಮಿಕ ನ್ಯಾಯಾಲಯ ಹಗುರವಾಗಿ ಪರಿಗಣಿಸಬಾರದಿತ್ತು’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.