ರಾಜ್ಯಪಾಲ ಥಾವರಚಂದ್ ಗೆಹಲೋತ್
ಬೆಂಗಳೂರು: ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಇತರ ಲಾಭದಾಯಕ ಹುದ್ದೆ ಹೊಂದಿದ ಕಾರಣಕ್ಕೆ ಶಾಸಕ ಸ್ಥಾನದಿಂದ ಅನರ್ಹರಾಗುವುದನ್ನು ತಡೆಯುವ ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಂಕಿತ ಹಾಕಿದ್ದಾರೆ. ಈ ಸಂಬಂಧ ಕಾನೂನು ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ಸಲಹೆಗಾರರು, ಯಾವುದೇ ಆಯೋಗದ ಅಧ್ಯಕ್ಷರು ಹಾಗೂ ರಾಜ್ಯ ಪರಿವರ್ತನಾ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕಗೊಂಡರೆ ಅವರನ್ನು ಅನರ್ಹಗೊಳಿಸಲು ಕರ್ನಾಟಕ ವಿಧಾನಮಂಡಲ ಕಾಯ್ದೆಯಲ್ಲಿ ಅವಕಾಶವಿತ್ತು.
ವಿಧಾನಸಭಾ ಸದಸ್ಯರಾಗಿರುವ ಬಸವರಾಜ ರಾಯರಡ್ಡಿ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾಗಿ, ಬಿ.ಆರ್. ಪಾಟೀಲ ಮುಖ್ಯಮಂತ್ರಿಯವರ ಸಲಹೆಗಾರರಾಗಿ ಮತ್ತು ಆರ್.ವಿ. ದೇಶಪಾಂಡೆ ಅವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಈ ಮೂವರನ್ನೂ ಲಾಭದಾಯಕ ಹುದ್ದೆ ವ್ಯಾಪ್ತಿಯಿಂದ ಹೊರಗಿಟ್ಟು, ರಕ್ಷಿಸುವುದಕ್ಕೆ ತಿದ್ದುಪಡಿ ಮಸೂದೆ ರೂಪಿಸಲಾಗಿತ್ತು.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ವಿಧಾನಸಭೆಯಲ್ಲಿ ‘ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ’ ಮಂಡಿಸಿದಾಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಂದ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.
2024ರ ಫೆಬ್ರುವರಿಯಲ್ಲಿ ವಿಧಾನ ಮಂಡಲದ ಅನುಮೋದನೆ ಪಡೆದ ಮಸೂದೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತಾದರೂ, ರಾಜ್ಯಪಾಲರು ಸಹಿ ಹಾಕಿರಲಿಲ್ಲ. ಈಗ ರಾಜ್ಯಪಾಲರ ಅಂಕಿತ ದೊರೆತಿದ್ದು ಬಿ.ಆರ್.ಪಾಟೀಲ, ಬಸವರಾಜ ರಾಯರಡ್ಡಿ ಮತ್ತು ಆರ್.ವಿ.ದೇಶಪಾಂಡೆ ಅವರು ಅನರ್ಹತೆ ತೂಗುಗತ್ತಿಯಿಂದ ಪಾರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.