ADVERTISEMENT

ಗಿಡ ಮರ ಬೆಳೆಸಿದಾಕ್ಷಣ ಜಮೀನೇ ನಿಮ್ಮದಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 16:09 IST
Last Updated 22 ಜನವರಿ 2024, 16:09 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸರ್ಕಾರಿ ಜಮೀನಿನಲ್ಲಿ ಗಿಡ, ಮರ ಬೆಳೆಸಲು ಸಾರ್ವಜನಿಕರಿಗೆ ಅವಕಾಶ ನೀಡಿದ ಮಾತ್ರಕ್ಕೆ ಆ ಜಮೀನನ್ನು ನಮಗೇ ಮಂಜೂರು ಮಾಡಲಾಗಿದೆ ಎಂದು ಯಾರೂ ಭಾವಿಸಬಾರದು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ತುಮಕೂರು ತಾಲ್ಲೂಕಿನ ಯಲದಡ್ಲು ಗ್ರಾಮದ ಸೀಬಿ ಲಿಂಗಯ್ಯ ಮತ್ತು ಅವರ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಈ ಪ್ರಕರಣದಲ್ಲಿನ ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಅರ್ಜಿದಾರರಿಗೆ ಜಮೀನಿನಲ್ಲಿ ಗಿಡ, ಮರ ಬೆಳೆಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಅರ್ಜಿದಾರರಿಗೆ ಭೂಮಿಯನ್ನು ಮಂಜೂರು ಮಾಡಿರಲಿಲ್ಲ. ಭೂಮಿಯ ಮಾಲೀಕತ್ವ ಸರ್ಕಾರದ ಸುಪರ್ದಿಲ್ಲಿಯೇ ಇದೆ. ಜಮೀನಿನಲ್ಲಿ ಗಿಡ, ಮರ ಬೆಳೆಸುವ ಹಕ್ಕು ನೀಡಿದ್ದರಿಂದ ಜಮೀನನ್ನೇ ಮಂಜೂರು ಮಾಡಿದಂತೆ ಎಂಬ ವಾದವನ್ನು ಪರಿಗಣಿಸಲಾಗದು’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

‘ಸರ್ಕಾರವು ಪರಿಹಾರ ನೀಡಿದ ಬಳಿಕ ಖಾಸಗಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದೆ. ಈ ನಿಯಮ ಸರ್ಕಾರಿ ಜಮೀನಿಗೆ ಅನ್ವಯಿಸುವುದಿಲ್ಲ. ಖಾಸಗಿ ಜಮೀನನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರವನ್ನು ಸರ್ಕಾರ ಯಾವತ್ತೂ ಹೊಂದಿರುತ್ತದೆ. ಹಾಗಾಗಿ, ಸರ್ಕಾರಿ ಜಮೀನನ್ನು ಸರ್ಕಾರವೇ ಸ್ವಾಧೀನಪಡಿಸಿಕೊಳ್ಳುವ ಪ್ರಶ್ನೆ ಹಾಗೂ ಅನಿವಾರ್ಯತೆ ಎದುರಾಗುವುದೇ ಇಲ್ಲ‘ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣವೇನು?: ತುಮಕೂರು ತಾಲ್ಲೂಕಿನ ಯಲದಡ್ಲು ಗ್ರಾಮದ ನಿವಾಸಿಯಾಗಿದ್ದ ಸೀಬಿ ಲಿಂಗಯ್ಯ ಅವರಿಗೆ ಸರ್ಕಾರ 1951ರ ನವೆಂಬರ್ 16ರಂದು ಅದೇ ಗ್ರಾಮದ ಸರ್ವೇ ನಂಬರ್‌ 96ರಲ್ಲಿನ ಸರ್ಕಾರಿ ಜಮೀನಿನಲ್ಲಿ ಗಿಡ, ಮರ ಬೆಳೆಸಲು ಅನುಮತಿ ನೀಡಿತ್ತು. ಆದರೆ, ಜಮೀನಿನ ಮೇಲಿನ ಯಾವುದೇ ಹಕ್ಕನ್ನು ಅವರಿಗೆ ಹಸ್ತಾಂತರ ಮಾಡಿರಲಿಲ್ಲ. 2008ರ ಡಿಸೆಂಬರ್ 4ರಂದು ಈ ಜಮೀನು ಹಾಗೂ ಸುತ್ತಲಿನ ಜಾಗದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಕೈಗಾರಿಕಾ ಅಭಿವೃದ್ಧಿಪಡಿಸಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಈ ಜಮೀನಿಗೆ ಪರಿಹಾರ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೆಐಎಡಿಬಿ ತಿರಸ್ಕರಿಸಿದ್ದರಿಂದ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಏಕಸದಸ್ಯ ನ್ಯಾಯಪೀಠ ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಸೀಬಿ ಲಿಂಗಯ್ಯ ಸಾವನ್ನಪ್ಪಿದ್ದರು. ಅವರ ಮಕ್ಕಳು ಪ್ರಕರಣವನ್ನು ಮುಂದುವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.