ADVERTISEMENT

ಸಿಎಂ ಬೆನ್ನುಬಿದ್ದ ಸಚಿವಾಕಾಂಕ್ಷಿಗಳು: ನಿರಾಸೆಯಿಂದ ಹೋದ ಸಚಿವ ನಾಗೇಶ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 9:11 IST
Last Updated 12 ಜನವರಿ 2021, 9:11 IST
ನಾಗೇಶ್‌
ನಾಗೇಶ್‌   

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಖಚಿತವಾದ ಬೆನ್ನಲ್ಲೇ ಸಚಿವಾಕಾಂಕ್ಷಿ ಶಾಸಕರು ಮತ್ತು ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಇರುವ ಸಚಿವರು ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿಯವರ ನಿವಾಸಕ್ಕೆ ಭೇಟಿ ನೀಡಿ, ಅವರ ಮೇಲೆ ಪ್ರಭಾವ ಬೀರುವ ಕಸರತ್ತು ನಡೆಸಿದರು.

ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರು ಸೋಮವಾರದಿಂದ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಯತ್ನ ಮಂಗಳವಾರ ಬೆಳಿಗ್ಗೆ ಫಲಿಸಿತು. ಆದರೆ, ಮಂತ್ರಿ ಮಂಡಲದಲ್ಲಿ ಉಳಿಯುತ್ತಾರೋ ಇಲ್ಲವೊ ಎಂಬ ಬಗ್ಗೆ ಅವರಿಗೆ ಭರವಸೆ ಸಿಕ್ಕಿಲ್ಲ. ಹೀಗಾಗಿ ಭೇಟಿಯ ಬಳಿಕ ಅನ್ಯಮನಸ್ಕರಾಗಿ ಕಂಡು ಬಂದರು. ಸರ್ಕಾರ ರಚನೆಯಲ್ಲಿ ತಮ್ಮ ಪಾತ್ರವೂ ಇರುವುದರಿಂದ ಯಾವುದೇ ಕಾರಣಕ್ಕೂ ತಮ್ಮನ್ನು ಕೈಬಿಡಬಾರದು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಯ ಭೇಟಿಯ ಬಳಿಕ ಅವರು ಸುದ್ದಿಗಾರರು ಜತೆ ಮಾತನಾಡಲು ಯತ್ನಿಸಿದಾಗ ನಿರಾಕರಿಸಿದರು. ನಿರಾಸೆಗೊಂಡಂತೆ ಕಂಡು ಬಂದಿತು.

ADVERTISEMENT

ಹಿರಿಯ ಶಾಸಕ ಮುರುಗೇಶ್‌ ನಿರಾಣಿ, ಅರವಿಂದ ಬೆಲ್ಲದ ಕೂಡ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ಇಬ್ಬರ ಹೆಸರುಗಳು ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿ ಇರುವುದರಿಂದ ಭೇಟಿಗೆ ಮಹತ್ವ ಬಂದಿದೆ. ಈ ಮಧ್ಯೆ ಸಂಪುಟದಿಂದ ಕೈಬಿಡುವವರ ಸಂಖ್ಯೆ ಮೂರಕ್ಕೇರಿದೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಹಬ್ಬಿದೆ.

ಎನ್‌.ಮಹೇಶ್‌ ಚಾಲ್ತಿಗೆ:ಎಚ್‌.ನಾಗೇಶ್‌ ಅವರನ್ನು ಕೈಬಿಟ್ಟು ಅದರಿಂದ ತೆರವಾಗುವದ ಸಚಿವ ಸ್ಥಾನಕ್ಕೆ ಬಿಎಸ್‌ಪಿ ಉಚ್ಛಾಟಿತ ಶಾಸಕ ಎನ್‌. ಮಹೇಶ್‌ ತರಲಾಗುವುದು ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚಿನ ದಿನಗಳಲ್ಲಿ ಮಹೇಶ್‌ ಅವರು ಬಹಿರಂಗವಾಗಿ ಬಿಜೆಪಿ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಬೆಂಬಲಿಸುವುದಾಗಿ ಮಹೇಶ್‌ ಹೇಳಿದ್ದಾರೆ.

ಮಹೇಶ್‌ ಅವರು ಬಿಜೆಪಿಗೆ ಸೇರುವ ಬಗ್ಗೆ ಒಲವು ತೋರಿಸಿರುವುದು ನಿಜ. ಈ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಚಿವ ಸ್ಥಾನ ಕೊಟ್ಟು ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಬಿಜೆಪಿಯ ಮುಖಂಡರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.