ADVERTISEMENT

ಮೊಘಲರ ಆಸ್ಥಾನದಲ್ಲಿದ್ದವರೇ ಈಗಿನ ಆರೆಸ್ಸೆಸ್‌ ನಾಯಕರು -ಸಿದ್ದರಾಮಯ್ಯ

ಕೆಪಿಸಿಸಿಯಿಂದ ಕ್ವಿಟ್‌ ಇಂಡಿಯಾ ಸ್ಮರಣಾರ್ಥ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 19:11 IST
Last Updated 9 ಆಗಸ್ಟ್ 2021, 19:11 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಮೊಘಲರ ಆಳ್ವಿಕೆಯಲ್ಲಿ, ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದ ಜನರೇ ಇಂದು ಆರೆಸ್ಸೆಸ್‌ ನಾಯಕರಾಗಿದ್ದಾರೆ. ಈಗ ಇವರು ಭಾರತೀಯತೆ, ದೇಶಭಕ್ತಿ ಪಾಠ ಮಾಡುತ್ತಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಕ್ವಿಟ್‌ ಇಂಡಿಯಾ ಸ್ಮರಣಾರ್ಥ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು, ‘ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ ಕಾರಣಕ್ಕೆ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಿದರು. ಟಿಪ್ಪು ಮಾಡಿದ ದೇಶದ್ರೋಹವೇನು? ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನವರು, ಹಣಕಾಸು ಮಂತ್ರಿಯಾಗಿದ್ದ ಕೃಷ್ಣಸ್ವಾಮಿ ಹಿಂದುವಲ್ಲವೇ’ ಎಂದು ಪ್ರಶ್ನಿಸಿದರು.

‘ಬ್ರಿಟಿಷರ ವಿರುದ್ಧ ಹೈದರಾಲಿ ಮತ್ತು ಟಿಪ್ಪು ನಾಲ್ಕು ಮಹಾಯುದ್ಧಗಳನ್ನು ಮಾಡಿದ್ದರು. ಬ್ರಿಟಿಷರನ್ನು ದೇಶದಿಂದ ಹೊರಹಾಕುವ ಪ್ರಯತ್ನ ಮಾಡಿದ್ದರು. ಇಂಥ ಟಿಪ್ಪುವಿನ ಜಯಂತಿ ಮಾಡಿದರೆ ಬಿಜೆಪಿಯವರಿಗೆ ಕೋಪ ಬರುತ್ತದೆ. ಟಿಪ್ಪು ಮೇಲಿರುವ ಕೋಪ ಪೂರ್ಣಯ್ಯನ ಮೇಲೆ ಏಕಿಲ್ಲ? ಇಂಥವರು ದೇಶಕಟ್ಟುತ್ತಾರಾ? ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ADVERTISEMENT

‘ಈಸ್ಟ್ ಇಂಡಿಯಾ ಕಂಪನಿ ನಮ್ಮ ದೇಶವನ್ನು ಲೂಟಿ ಮಾಡಿತು. ನಮ್ಮ ದೇಶಕ್ಕೆ ಬರುವ ಮುಂಚೆ ಜಗತ್ತಿನ ಜಿಡಿಪಿಗೆ ಬ್ರಿಟಿಷರ ಕೊಡುಗೆ ಶೇ 2 ಇತ್ತು. ನಮ್ಮ ದೇಶದಿಂದ ಅವರು ಹೊರ ಹೋಗುವಾಗ ಶೇ 10ಕ್ಕೆ ಹೋಗಿತ್ತು. ನಮ್ಮ ದೇಶ ಹಿಂದೆಯೇ ಸಮೃದ್ಧವಾಗಿತ್ತು. ದೇಶದ ಜೆಡಿಪಿ ಶೇ 23 ಇತ್ತು. ಬ್ರಿಟಿಷರು ಕೊಳ್ಳೆ ಹೊಡೆದ ಪರಿಣಾಮ ಭಾರತ ಬಡ ದೇಶವಾಯಿತು. ಇವತ್ತು ಮತ್ತೆ ಭಾರತ ಬಡದೇಶವಾಗುತ್ತಿದ್ದರೆ ಅದಕ್ಕೆ ಕಾರಣ ಬಿಜೆಪಿಗರು’ ಎಂದರು.

‘ಹಿಂದೆ ಬ್ರಿಟಿಷರ ವಿರುದ್ಧ ಮಾಡಿದ ಹೋರಾಟದ ಮಾದರಿಯಲ್ಲೇ ಈಗ ಮತ್ತೆ ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ಹೋರಾಟ ಮಾಡಬೇಕಿದೆ. ಕ್ವಿಟ್ ಇಂಡಿಯಾ ಚಳವಳಿ ದಿನ, ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ಪ್ರಮುಖ ದಿನಗಳಂದು ನಾವೆಲ್ಲ ತ್ಯಾಗ ಬಲಿದಾನದ ಮನಸ್ಥಿತಿ ಬೆಳೆಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಾಗುತ್ತದೆ. ಜೊತೆಗೆ ಬಿಜೆಪಿಯನ್ನು ತೊಲಗಿಸುವ ಕೆಲಸಕ್ಕೆ ಒಂದಾಗಿ ಕೆಲಸ ಮಾಡಬೇಕು‘ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.