ADVERTISEMENT

ವಿಮಾನ ನಿಲ್ದಾಣದಿಂದ ರ‍್ಯಾಲಿಯಲ್ಲಿ ಕರೆತರಲು ಅನುಮತಿ ನೀಡಿರಲಿಲ್ಲ: ಗೃಹ ಇಲಾಖೆ

ಹೈಕೋರ್ಟ್‌ಗೆ ಗೃಹ ಇಲಾಖೆಯಿಂದ ಪ್ರಮಾಣಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 18:33 IST
Last Updated 5 ನವೆಂಬರ್ 2020, 18:33 IST
ತೇಜಸ್ವಿ ಸೂರ್ಯ-
ತೇಜಸ್ವಿ ಸೂರ್ಯ-   

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾದ ಬಳಿಕ ದೆಹಲಿಯಿಂದ ಹಿಂದಿರುಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಗೆ ಮೆರವಣಿಗೆಯಲ್ಲಿ ಕರೆತರಲು ಪೊಲೀಸರು ಅನುಮತಿ ನೀಡಿರಲಿಲ್ಲ ಎಂದು ಗೃಹ ಇಲಾಖೆ ಹೈಕೋರ್ಟ್‌ಗೆ ತಿಳಿಸಿದೆ.

ಸೆಪ್ಟೆಂಬರ್‌ 30ರಂದು ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿವರೆಗೂ ನಡೆಸಿದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ತೇಜಸ್ವಿ ಸೂರ್ಯ ಮತ್ತು ಇತರರು ಮಾಸ್ಕ್‌ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ಪೀಠ ಗುರುವಾರ ನಡೆಸಿತು.

ನ್ಯಾಯಾಲಯದ ಸೂಚನೆಯಂತೆ ಪ್ರಕರಣದ ಕುರಿತು ವರದಿ ಸಲ್ಲಿಸಿದ ಅಪರಾಧ ವಿಭಾಗದ ಡಿಸಿಪಿ, ‘ತೇಜಸ್ವಿ ಸೂರ್ಯ ಮೆರವಣಿಗೆ ವೇಳೆ ಮಾಸ್ಕ್‌ ಧರಿಸಿದ್ದರು ಮತ್ತು ಅಂತರ ಕಾಪಾಡಿಕೊಂಡಿದ್ದರು’ ಎಂದು ತಿಳಿಸಿದರು. ವರದಿಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರು, ‘ಪೊಲೀಸರ ವರದಿ ಸತ್ಯಕ್ಕೆ ವಿರುದ್ಧ ವಾಗಿದೆ. ಸಂಸದರು ಸೇರಿದಂತೆ ಯಾರೂ ಮಾಸ್ಕ್‌ ಧರಿಸಿರಲಿಲ್ಲ. ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ದಿನಪತ್ರಿಕೆಗಳಲ್ಲಿ ಪ್ರಕಟವಾದ ಫೋಟೊಗಳಲ್ಲಿ ಸ್ಪಷ್ಟವಾಗಿ ಇದಕ್ಕೆ ಸಾಕ್ಷ್ಯವಿದೆ’ ಎಂದರು.

ADVERTISEMENT

ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ‘ಸಂಸದರೂ ಸೇರಿದಂತೆ ಯಾರೂ ಮಾಸ್ಕ್‌ ಧರಿಸಿ ರಲಿಲ್ಲ ಎಂಬುದು ಫೋಟೊಗಳಲ್ಲಿ ಕಾಣಿಸುತ್ತದೆ. ಆದರೆ, ಪೊಲೀಸ್‌ ಅಧಿಕಾರಿಯಾಗಿ ನೀವು ಈ ರೀತಿ ವರದಿ ಸಲ್ಲಿಸಿದ್ದೀರಿ. ಒಂದೋ ನೀವು ಗಟ್ಟಿ ನಿಲುವು ತಾಳಿ ಆ ರ‍್ಯಾಲಿಯಲ್ಲಿ ಯಾವುದೇ ಉಲ್ಲಂಘನೆ ನಡೆದಿಲ್ಲ ಎಂದು ಹೇಳಿ, ಇಲ್ಲವಾದರೆ ಉಲ್ಲಂಘನೆ ಆಗಿರುವುದನ್ನು ಒಪ್ಪಿಕೊಳ್ಳಬೇಕು. ನೀವು ಅಸಹಾಯಕರಾಗಿದ್ದೀರಿ’ ಎಂದು ಅಧಿಕಾರಿಗೆ ಹೇಳಿತು.

ನಿಯಮ ಉಲ್ಲಂಘಿಸುವ ಸಾಮಾನ್ಯ ಜನರಿಂದ ಸರ್ಕಾರ ದಂಡ ವಸೂಲಿ ಮಾಡುತ್ತಿದೆ. ಆದರೆ, ಪ್ರಭಾವಿ ವ್ಯಕ್ತಿಗಳು ನಿಯಮ ಉಲ್ಲಂಘಿಸಿದರೆ ದಂಡ ಕೂಡ ವಸೂಲಿ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಪ್ರಕರಣ ದಾಖಲು: ‘ಮೆರವಣಿಗೆ ವೇಳೆ ನಿಯಮ ಉಲ್ಲಂಘಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಎರಡು ಪ್ರಕರಣ ದಾಖಲಿಸಲಾಗಿದೆ. 15 ಜನರ ವಿರುದ್ಧ ದೇವನಹಳ್ಳಿ ನ್ಯಾಯಾಲಯದಲ್ಲಿ ಮತ್ತು 25 ಜನರ ವಿರುದ್ಧ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ಟೋಬರ್‌ 30ರಿಂದ ನವೆಂಬರ್‌ 2ರ ಅವಧಿಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ಸಮಯದಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದ 18 ರಾಜಕಾರಣಿಗಳ ವಿರುದ್ಧ ಅಸಂಜ್ಞೇಯ ಪ್ರಕರಣ ದಾಖಲಿ ಸಲಾಗಿದೆ’ ಎಂದು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

‘ಮೆರವಣಿಗೆಗೆ ಸಂಬಂಧಿಸಿದಂತೆ ದಾಖಲಿಸಿರುವ ಪ್ರಕರಣಗಳಲ್ಲಿ ಡಿಸಿಪಿಗೆ ಸಲ್ಲಿಸಿದ್ದ ದೂರಿನ ಪ್ರತಿಗಳನ್ನು ಹೆಚ್ಚುವರಿ ಸರ್ಕಾರಿ ವಕೀಲರು ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅ.30ರಿಂದ ನ.2ರ ಅವಧಿಯಲ್ಲಿ ರಾಜಕಾರಣಿಗಳ ವಿರುದ್ಧ ದಾಖಲಿಸಿರುವ ಅಸಂಜ್ಞೇಯ ಪ್ರಕರಣಗಳಲ್ಲಿ ಉಲ್ಲೇಖಿಸಿರುವ ನಿಯಮ ಉಲ್ಲಂಘನೆಗಳ ವಿವರವನ್ನೂ ಒದಗಿ ಸಬೇಕು’ ಎಂದು ನ್ಯಾಯಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.