ADVERTISEMENT

ರಾಜ್ಯದ 10 ಮಹಾನಗರ ಪಾಲಿಕೆಗಳ 90 ಅಧಿಕಾರಿಗಳ ಎತ್ತಂಗಡಿ

ಹೈಕೋರ್ಟ್‌ ಆದೇಶದ ಬೆನ್ನಲ್ಲೇ ‘ಮಹಾನಗರ’ ತೊರೆದ ಸಬ್‌ರಿಜಿಸ್ಟ್ರಾರ್‌ಗಳು

ಚಂದ್ರಹಾಸ ಹಿರೇಮಳಲಿ
Published 24 ಡಿಸೆಂಬರ್ 2024, 21:49 IST
Last Updated 24 ಡಿಸೆಂಬರ್ 2024, 21:49 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ಬೆಂಗಳೂರು: ಕಾನೂನು ಹೋರಾಟದ ಜಟಾಪಟಿಯ ನಡುವೆಯೇ ಬೆಂಗಳೂರು ಹಾಗೂ ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಠಿಕಾಣಿ ಹೂಡಿದ್ದ ಉಪ ನೋಂದಣಾಧಿಕಾರಿಗಳನ್ನು ಸರ್ಕಾರ ಎತ್ತಂಗಡಿ ಮಾಡಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಾವೇರಿ–2 ತಂತ್ರಾಂಶ ಅಳವಡಿಕೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕಂದಾಯ ಇಲಾಖೆ ಕೈಗೊಂಡಿದೆ. ದೊಡ್ಡ ನಗರಗಳಲ್ಲಿ ಹಲವು ವರ್ಷಗಳಿಂದ ಕುಳಿತು ಭೂಮಾಫಿಯಾ ಜತೆ ಶಾಮೀಲಾಗಿ ಅವ್ಯವಹಾರ ನಡೆಸುತ್ತಿದ್ದ ಉಪ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿ ಕಚೇರಿಯ ಇತರೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ನಿರ್ಧರಿಸಿತ್ತು. ವರ್ಗಾವಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಇದೇ ಮೊದಲ ಬಾರಿ ಕೌನ್ಸೆಲಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು.

ADVERTISEMENT

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಹಾಗೂ ಮಹಾನಗರ ಪಾಲಿಕೆ ಕೇಂದ್ರ ಸ್ಥಾನಗಳ ಹುದ್ದೆಗಳನ್ನು ಕೌನ್ಸೆಲಿಂಗ್‌ ಮೂಲಕ ಆಯ್ಕೆ ಮಾಡಿಕೊಳ್ಳಲು ಷರತ್ತುಗಳನ್ನು ವಿಧಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಉಪ ನೋಂದಣಾಧಿಕಾರಿಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಹೆಚ್ಚುವರಿ ಉಪ ನೋಂದಣಾಧಿಕಾರಿಗಳು, ಕೇಂದ್ರ ಸ್ಥಾನ ಸಹಾಯಕರು ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಕೆಎಟಿ ತೀರ್ಪಿನ ಪ್ರಕಾರ, ವರ್ಗಾವಣೆ ಆದೇಶದಲ್ಲಿನ ನ್ಯೂನತೆ ಸರಿಪಡಿಸಿ ಎರಡು ವಾರಗಳ ಹಿಂದೆ ವರ್ಗಾವಣೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಕೆಲವರ ವರ್ಗಾವಣೆಗೆ ಹೈಕೋರ್ಟ್‌ ತಡೆ ನೀಡಿದ್ದರಿಂದ ಪ್ರಕ್ರಿಯೆಗಳು ಮತ್ತೆ ಸ್ಥಗಿತವಾಗಿದ್ದವು. ಈಗ ಹೈಕೋರ್ಟ್‌ನ ಮಧ್ಯಂತರ ಆದೇಶದಂತೆ ದೀರ್ಘ ಸಮಯ ಠಿಕಾಣಿ ಹೂಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.  

‘ಮಹಾನಗರ’ ಮೋಹ:  ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ (ಬಿಎಂಆರ್‌ಡಿಎ ವ್ಯಾಪ್ತಿ) ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಐದು ವರ್ಷ ಪೂರ್ಣಗೊಳಿಸಿರುವ ಹಾಗೂ ಮಹಾನಗರ ಪಾಲಿಕೆಗಳಾದ ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ವಿಜಯಪುರ ಕೇಂದ್ರ ಸ್ಥಾನದ ತಾಲ್ಲೂಕುಗಳಲ್ಲಿ ನಾಲ್ಕು ವರ್ಷ ಮೇಲ್ಪಟ್ಟು ಕಾರ್ಯನಿರ್ವಹಿಸಿದವರು ಮತ್ತೆ ಅದೇ ವ್ಯಾಪ್ತಿಯ ಕಚೇರಿಗಳನ್ನು ಆಯ್ಕೆ ಮಾಡಿಕೊಳ್ಳುವಂತಿಲ್ಲ. ಅಂಥವರು ತಾಲ್ಲೂಕು ಕೇಂದ್ರಗಳಿಗೆ ತೆರಳಬೇಕು ಎಂದು ವರ್ಗಾವಣೆಯ ಹೊಸ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಶೇ 99ರಷ್ಟು ಅಧಿಕಾರಿಗಳು 8–10 ವರ್ಷಗಳಿಗೂ ಮೇಲ್ಪಟ್ಟು  ಈ ವ್ಯಾಪ್ತಿಯ ಪ್ರದೇಶದಲ್ಲೇ ಕೆಲಸ ಮಾಡುತ್ತಿದ್ದರು. ಮಹಾನಗರ ತೊರೆಯಲು ನಿರಾಕರಿಸಿ, ಸರ್ಕಾರದ ವಿರುದ್ಧ ಕೋರ್ಟ್‌ ಮೊರೆಹೋಗಿದ್ದರು. 

ಅಂಗವಿಕಲ ಅಧಿಕಾರಿಗಳಿಗೆ ವಿನಾಯಿತಿ

ನೋಂದಣಿ ಇಲಾಖೆಯ ನೌಕರರ ವರ್ಗಾವಣೆಗೆ ರಾಜ್ಯ ಸರ್ಕಾರ ರೂಪಿಸಿದ ಹೊಸ ನಿಯಮಾವಳಿಯಲ್ಲಿ ಅಂಗವಿಕಲ ಅಧಿಕಾರಿಗಳು, ಕೇಂದ್ರ ಸ್ಥಾನ ಸಹಾಯಕರಿಗೆ ವಿನಾಯಿತಿ ನೀಡಿರಲಿಲ್ಲ. ಕಂದಾಯ ಇಲಾಖೆ ಜುಲೈ 31ರಂದು ಹೊರಡಿಸಿರುವ ಆದೇಶದಲ್ಲೂ ಮಾಹಿತಿ ಇರಲಿಲ್ಲ. 

ಕರ್ನಾಟಕ ಸರ್ಕಾರದ ಸಾರ್ವತ್ರಿಕ ವರ್ಗಾವಣೆ ನಿಯಮ–2013ಕ್ಕೆ ತಿದ್ದುಪಡಿ ತಂದು ಇದೇ ಜೂನ್‌ 12ರಂದು ಹೊರಡಿಸಿದ್ದ ಹೊಸ ಆದೇಶದಲ್ಲೂ ಅಂಗವಿಕಲ ಅಧಿಕಾರಿಗಳು, ನೌಕರರಿಗೆ ಅಥವಾ ಅವಲಂಬಿತ ಕುಟುಂಬದ ಸದಸ್ಯರು ಅಂಗವಿಕಲರು ಇದ್ದಲ್ಲಿ ಅಂಥವರಿಗೆ ಹಲವು ವಿನಾಯಿತಿ ನೀಡಲಾಗಿದೆ. ಯಾವುದೇ ಇಲಾಖೆಯಲ್ಲಿ ಒಂದು ಸ್ಥಳದಲ್ಲಿ ಕೆಲಸ ಮಾಡುತ್ತಿರುವವರಿಗೆ ಸೇವಾ ಹಿರಿತನದ ಆಧಾರದಲ್ಲಿ ವರ್ಗಾವಣೆಗೆ ಅರ್ಹರಾಗಿದ್ದಲ್ಲಿ ಅಂಥವರಿಗೆ ತಾವು ಬಯಸಿದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಪ್ರಾಶಸ್ತ್ಯ ನೀಡಬೇಕು. ಸಾಧ್ಯವಾದಷ್ಟು ಹತ್ತಿರದ, ಅನುಕೂಲಕರ ಸ್ಥಳಗಳನ್ನು ನೀಡಲು ಸಕ್ಷಮ ಪ್ರಾಧಿಕಾರಗಳು ಕ್ರಮ ಕೈಗೊಳ್ಳಬೇಕು ಎಂಬ ಅಂಶಗಳನ್ನು ಕೋರ್ಟ್‌ ಎತ್ತಿಹಿಡಿದಿದೆ. ಹಾಗಾಗಿ, ಅವರನ್ನು ವರ್ಗಾವಣಾ ಪ್ರಕ್ರಿಯೆಯಿಂದ ತಾತ್ಕಾಲಿಕವಾಗಿ ಕೈಬಿಡಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳು ತಕ್ಷಣ ವರದಿ ಮಾಡಿಕೊಳ್ಳಬೇಕು. ನೋಂದಣಿ ಕಾರ್ಯಕ್ಕೆ ಅಡೆತಡೆಯಾಗದಂತೆ ಆಯಾ ಕಚೇರಿಯ ಲಾಗಿನ್‌ ಐಡಿ ಒದಗಿಸಬೇಕು ಎಂದು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ
ಕೆ.ಎ. ದಯಾನಂದ, ನೋಂದಣಿ ಮಹಾಪರಿವೀಕ್ಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.