ADVERTISEMENT

ವಿವಿಧೆಡೆ ಕಳವು: ರಾಮ್‌ಜೀನಗರ ಗ್ಯಾಂಗ್‌ನ 11 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 19:45 IST
Last Updated 25 ಡಿಸೆಂಬರ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯದಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ತಿರುಚ್ಚಿಯ ‘ರಾಮ್‌ಜೀನಗರ ಗ್ಯಾಂಗ್‌’ನ 11 ಮಂದಿಯನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಜನಿಕಾಂತ್ ಯಾನೆ ರಜನಿ (48), ಸುಂದರ್‌ ರಾಜನ್‌ ಯಾನೆ ಸುದಾನ್‌ (25), ಸೆಂಥಿಲ್‌ ಕುಮಾರ್‌ ಯಾನೆ ಸೆಂಥಿಲ್‌ (46), ಗೋಪಾಲ (39), ವೆಂಕಟೇಶ್‌ ಯಾನೆ ರವಿ (48), ಸುಬ್ರಮಣಿ ಯಾನೆ ಸುಬ್ಬು (55), ಶಿವಕುಮಾರ ಯಾನೆ ಶಿವಾ (40), ಮುರಳಿ ಯಾನೆ ಮೋಹನ್‌ (33), ಮೂರ್ತಿ (27), ಮುರುಗನಂದಂ (28) ಹಾಗೂ ಕುಮಾರ್‌ (48) ಬಂಧಿತರು. ಇವರಿಂದ7 ಲ್ಯಾಪ್‌ಟಾಪ್‌, 1 ಕ್ಯಾಮೆರಾ, ಆ್ಯಪಲ್‌ ಐಪಾಡ್‌ ಹಾಗೂ ₹50 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಠಾಣೆ ವ್ಯಾಪ್ತಿಯಲ್ಲಿ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್‌ ಕದ್ದಿರುವ ಕುರಿತು ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ವೇಳೆ ರೈಲ್ವೆ ನಿಲ್ದಾಣದ ಆಸುಪಾಸಿನಲ್ಲಿ ಅಪರಿಚಿತರ ಗುಂಪೊಂದು ನೆಲೆಸಿರುವ ಮಾಹಿತಿ ಲಭಿಸಿತ್ತು. ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ನಗರದ ವಿವಿಧೆಡೆ ಕಳ್ಳತನ ಮಾಡಿರುವ ವಿಷಯ ಬಾಯ್ಬಿಟ್ಟಿದ್ದರು’ ಎಂದು ತಿಳಿಸಿದರು.

ADVERTISEMENT

‘ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿಗಳು ತಂಡ ಕಟ್ಟಿಕೊಂಡು ನಗರಕ್ಕೆ ಬರುತ್ತಿದ್ದರು. ರೈಲ್ವೆ ನಿಲ್ದಾಣದ ಆಸುಪಾಸಿನಲ್ಲೇ ಠಿಕಾಣಿ ಹೂಡುತ್ತಿದ್ದರು. ಸಾಮಾನು ಸರಂಜಾಮುಗಳನ್ನು ಕಾಯಲು ಇಬ್ಬರನ್ನು ನಿಯೋಜಿಸಿ ಉಳಿದವರೆಲ್ಲಾ ಕಳ್ಳತನ ಮಾಡಲು ಹೋಗುತ್ತಿದ್ದರು. ಜನರ ಗಮನ ಬೇರೆಡೆ ಸೆಳೆದು ನಗದು, ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದರು. ಅದನ್ನು ಗುಂಪಿನ ಸದಸ್ಯನೊಬ್ಬನ ಮೂಲಕ ಊರಿಗೆ ರವಾನಿಸುತ್ತಿದ್ದರು’ ಎಂದು ಮಾಹಿತಿ ನೀಡಿದರು.

‘ಇವರ ಬಂಧನದಿಂದ ಮಾರತ್ತಹಳ್ಳಿ, ವೈಟ್‌ಫೀಲ್ಡ್‌, ಮಹದೇವಪುರ, ಅಶೋಕನಗರ, ದೇವನಹಳ್ಳಿ ಹಾಗೂ ಸರ್ಜಾಪುರ ಠಾಣೆಯ ತಲಾ ಒಂದು, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಯ ತಲಾ ಎರಡು, ಉಡುಪಿಯ ಒಂದು, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿವಿಧೆಡೆ ನಡೆದಿದ್ದ 42ಕ್ಕೂ ಹೆಚ್ಚು ಕಳವು ಪ್ರಕರಣಗಳು ಪತ್ತೆಯಾಗಿವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.