ADVERTISEMENT

ಮಹಾಭಾರತದಲ್ಲಿ ಹಲವು ಕಟ್ಟುಕತೆಗಳಿವೆ: ಎಸ್‌.ಎಲ್‌ ಬೈರಪ್ಪ

ಮಹಾಭಾರತ ಸಂದೇಶ: ರಾಷ್ಟ್ರೀಯ ಸಮ್ಮೇಳನದಲ್ಲಿ ಸಾಹಿತಿ ಎಸ್‌.ಎಲ್‌.ಭೈರಪ್ಪ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 20:16 IST
Last Updated 26 ಜೂನ್ 2019, 20:16 IST
‘ಬಿಯಾಂಡ್‌ ಆ್ಯಂಡ್ ಬಿಲೀಫ್‌’ ‍ಪುಸ್ತಕವನ್ನು ಎಸ್.ಎಲ್. ಭೈರಪ್ಪ ಬಿಡುಗಡೆ ಮಾಡಿದರು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್‌.ರಾಮಾನುಜ, ಇಸ್ಕಾನ್‌ ಅಧ್ಯಕ್ಷ ಮಧು ಪಂಡಿತ್ ದಾಸ ಇದ್ದಾರೆ –ಪ್ರಜಾವಾಣಿ ಚಿತ್ರ
‘ಬಿಯಾಂಡ್‌ ಆ್ಯಂಡ್ ಬಿಲೀಫ್‌’ ‍ಪುಸ್ತಕವನ್ನು ಎಸ್.ಎಲ್. ಭೈರಪ್ಪ ಬಿಡುಗಡೆ ಮಾಡಿದರು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್‌.ರಾಮಾನುಜ, ಇಸ್ಕಾನ್‌ ಅಧ್ಯಕ್ಷ ಮಧು ಪಂಡಿತ್ ದಾಸ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಸಮಯ ಮತ್ತು ಸ್ಥಳಗಳನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ರಾಮಾಯಣ ಮತ್ತು ಮಹಾಭಾರತ ಹಲವು ಕಟ್ಟುಕತೆಗಳಿಂದ ಕೂಡಿವೆ. ಆದರೆ, ಅವು ಗಹನವಾದ ಅರ್ಥವನ್ನು ಹೊಂದಿವೆ’ ಎಂದು ಸಾಹಿತಿ ಎಸ್‌.ಎಲ್. ಭೈರಪ್ಪ ಹೇಳಿದರು.

ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್‌ ಸಹಯೋಗದಲ್ಲಿ ಬುಧವಾರ ನಡೆದ ‘ಮಹಾಭಾರತ ಸಂದೇಶ’ ಕುರಿತ 5 ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಎರಡು ಮಹಾಕಾವ್ಯಗಳು ನಮ್ಮ ಬದುಕಿನೊಂದಿಗೆ ಬೆರೆತು ಹೋಗಿವೆ. 31 ವರ್ಷ ವಯಸ್ಸಿನ ಭೀಮ ಮತ್ತು 80ರ ಹರೆಯದ ಜರಾಸಂಧನ ನಡುವೆ ಮೂರು ದಿನಗಳು ಮಲ್ಲಯುದ್ಧ ನಡೆಯುತ್ತದೆಯೇ? ಅದೇ ರೀತಿ ಗುಡ್ಡಗಾಡು ಪ್ರದೇಶವಾದ ವಿರಾಟ ನಗರದಲ್ಲಿ ರಥಗಳಲ್ಲಿ ತೆರಳಿ ಯುದ್ಧ ಮಾಡಲು ಸಾಧ್ಯವೇ, ವಿಪರೀತ ಚಳಿ ಇರುವ ಬದರಿನಾಥದಲ್ಲಿ ಕುಳಿತು 85 ವರ್ಷ ದಾಟಿದ ವ್ಯಾಸರು ಮಹಾಭಾರತ ಬರೆದರೆ ಎಂಬ ಪ್ರಶ್ನೆಗಳು ಏಳುವುದು ಸಹಜ’ ಎಂದು ಹೇಳಿದರು.

ADVERTISEMENT

‘ಈ ಕಟ್ಟುಕತೆಗಳ ಹೊರತಾಗಿಯೂ ನಮ್ಮ ಸಂಸ್ಕೃತಿಯ ಮೂಲವನ್ನು ನಾವು ಇಲ್ಲಿಂದಲೇ ಕಟ್ಟಿಕೊಂಡಿದ್ದೇವೆ.ಧರ್ಮರಾಯ ಜೂಜಿಗೆ ದಾಸನಾಗಿದ್ದ ವ್ಯಕ್ತಿ. ಜೂಜಾಡಿ ರಾಜ್ಯ ಕಳೆದುಕೊಂಡಿದ್ದಲ್ಲದೇ, ವಿರಾಟ ರಾಜನಿಗೂ ಜೂಜಾಟ ಕಲಿಸಿದವನು. ಹಿರಿಯಣ್ಣ ಎಂಬ ಕಾರಣಕ್ಕೆ ಉಳಿದ ತಮ್ಮಂದಿರು ಧರ್ಮರಾಯನನ್ನು ವಿರೋಧಿಸಲಿಲ್ಲ. ಇದೇ ಸಂಸ್ಕೃತಿ ಇಂದಿಗೂ ಉಳಿದಿದೆ. ಕುಟುಂಬದಲ್ಲಿ ಹಿರಿಯ ಅಣ್ಣನಿಗೆ ತಂದೆಯ ನಂತರದ ಸ್ಥಾನವಿದೆ’ ಎಂದರು. ‘‍ಯಾವ ಸೋಲು ಅಥವಾ ಅವಮಾನವನ್ನಾದರೂ ಸಹಿಸುವ ನಮ್ಮ ಜನ, ಪತ್ನಿಯ ಮೇಲೆ ಬೇರೆಯವರು ಕಣ್ಣು ಹಾಕುವುದನ್ನು ಸಹಿಸುವುದಿಲ್ಲ. ಈ ಸಂಸ್ಕೃತಿ ಬೆಳೆದಿರುವುದು ಭೀಮನಿಂದ’ ಎಂದು ಅವರು ಪ್ರತಿಪಾದಿಸಿದರು.

‘ಕಟ್ಟುಕತೆಗಳಲ್ಲಿಗಹನವಾದ ಅರ್ಥವಿರುತ್ತದೆ. ನೈಜತೆಗೆ ಕಟ್ಟುಬಿದ್ದರೆ ಮೌಲ್ಯಗಳನ್ನು ಪ್ರತಿಪಾದಿಸುವಾಗ ಅಷ್ಟೊಂದು ಆಳಕ್ಕೆ ಇಳಿಯಲು ಆಗುವುದಿಲ್ಲ’ ಎಂದರು.

ಬುದ್ಧ ಉಪನಿಷತ್ತಿನ ಕಾಲಘಟ್ಟದ ಕೊಡುಗೆ

‘ಬುದ್ಧ ಕೂಡ ಉಪನಿಷತ್ತಿನ ಕಾಲಘಟ್ಟದ ಕೊಡುಗೆ’ ಎಂದು ಭೈರಪ್ಪ ಪ್ರತಿಪಾದಿಸಿದರು.

‘ಭಾರತೀಯ ಸಂಸ್ಕೃತಿಗೆ ವೇದವೇ ಮೂಲ ಎಂದು ಹೇಳಿದರೆ, ಬೌದ್ಧ ಮತ್ತು ಜೈನ ಧರ್ಮ ಏನು ಎಂದುನಮ್ಮ ಬುದ್ಧಿಜೀವಿಗಳು ಕೇಳುತ್ತಾರೆ. ಚಿಂತಕರಾದ ಆರ್‌.ಡಿ. ರಾನಡೆ ಅವರು ಹೇಳುವಂತೆ ಉಪನಿಷತ್ತಿನ ಕಾಲಘಟ್ಟದಲ್ಲಿ ಬಹಳಷ್ಟು ಚಿಂತಕರು, ಧ್ಯಾನಿಗಳು ಇದ್ದರು. ಅವರಲ್ಲಿ ಬುದ್ಧ ಕೂಡ ಒಬ್ಬ’‌ಎಂದು ಹೇಳಿದರು.

‘ವೇದಾಂತ ಒಬ್ಬರು ಬರೆದಿರುವುದಲ್ಲ, ಒಂದು ನಿಶ್ಚಿತ ಅವಧಿಯದ್ದೂ ಅಲ್ಲ. ಆ ಕಾಲಘಟ್ಟದಲ್ಲಿದ್ದ ಚಿಂತಕರಲ್ಲಿ ಕೆಲವರಿಗೆ ಪ್ರಚಾರ ಸಿಕ್ಕಿತು, ಕೆಲವರಿಗೆ ಸಿಗಲಿಲ್ಲ. ನಮ್ಮ ರಾಮಕೃಷ್ಣ ಪರಮಹಂಸರು ಮತ್ತು ರಮಣ ಮಹರ್ಷಿಗಳಿಗೂ ಪ್ರಚಾರ ಸಿಕ್ಕಿತು. ಹಾಗೆಂದ ಮಾತ್ರಕ್ಕೆ ಅವರಷ್ಟೇ ಚಿಂತಕರು ಎಂದಲ್ಲ.ಕೆಲವರು ಬೇಕೆಂದೇ ಪ್ರಚಾರದಿಂದ ದೂರ ಉಳಿದವರು ಇದ್ದಾರೆ. ಬುದ್ಧನಿಗೆ ಏಕಿಷ್ಟು ಪ್ರಚಾರ ಸಿಕ್ಕಿತು ಎಂಬುದನ್ನು ನಾನೀಗ ಹೇಳಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.