ADVERTISEMENT

ಕರೆಂಟ್‌ ಕೊರತೆ ಇದೆ, ಲೋಡ್‌ ಶೆಡ್ಡಿಂಗ್‌ ಇಲ್ಲ: ಪುನರುಚ್ಚರಿಸಿದ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 19:56 IST
Last Updated 25 ಅಕ್ಟೋಬರ್ 2018, 19:56 IST
   

ಬೆಂಗಳೂರು:‍ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಮತ್ತು ಲಭ್ಯತೆ ಮಧ್ಯೆ ವ್ಯತ್ಯಯ ತಲೆದೋರಿದ್ದು, ಹಗಲುಹೊತ್ತಿನಲ್ಲಿ ಪೂರೈಕೆಯಲ್ಲಿ ಕೊರತೆ ಇಲ್ಲದಿದ್ದರೂ ರಾತ್ರಿಯ ಪೀಕ್ ಅವರ್‌ನಲ್ಲಿ (ದಟ್ಟಣೆ ಅವಧಿ)ನಲ್ಲಿ ಅಭಾವ ಉಂಟಾಗಿದೆ.

ಇಂಧನ ಇಲಾಖೆ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ನಡೆಸಿದ ಸಭೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿದೆ.

ಆದರೆ, ಜನ ಹೆಚ್ಚು ವಿದ್ಯುತ್‌ ಬಳಕೆ ಮಾಡುವ ಅವಧಿಯಲ್ಲಿ (ಸಂಜೆ 5 ಗಂಟೆಯಿಂದ ರಾತ್ರಿ 10ರ ಮಧ್ಯೆ) 200ರಿಂದ 400 ಮೆಗಾವಾಟ್‌ ಕೊರತೆ ಎದುರಾಗಿದೆ. ಇದರಿಂದ ವಿದ್ಯುತ್‌ ವಿತರಣೆಯಲ್ಲಿ ಅಡಚಣೆ ಆಗಬಹುದು ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.

ADVERTISEMENT

‘ಯಾವುದೇ ಕಾರಣಕ್ಕೂ ವಿದ್ಯುತ್‌ ಲೋಡ್ ಶೆಡ್ಡಿಂಗ್ ಮಾಡಬಾರದು. ಪರ್ಯಾಯ ಮಾರ್ಗಗಳ ಮೂಲಕ ಸಮರ್ಪಕ ವಿದ್ಯುತ್‌ ಪೂರೈಕೆಗೆ ಕ್ರಮವಹಿಸಿ, ರಾಜ್ಯವನ್ನು ಮೈತ್ರಿ ಸರ್ಕಾರ ಕತ್ತಲೆಗೆ ತಳ್ಳುತ್ತಿದೆ ಎಂಬ ಆಪಾದನೆ ಬರದಂತೆ ನೋಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಟ್ಟಪ್ಪಣೆ ವಿಧಿಸಿದರು.

ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಯಾವುದೇ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ) ಲೋಡ್‍ ಶೆಡ್ಡಿಂಗ್ ಜಾರಿಗೆ ತಂದಿಲ್ಲ. ಲೋಡ್‍ ಶೆಡ್ಡಿಂಗ್ ಜಾರಿ ಮಾಡದಂತೆ ಸೂಚಿಸಲಾಗಿದೆ’ ಎಂದರು.

ನಗರ ಪ್ರದೇಶಗಳಲ್ಲಿ ನಿರಂತರ 24 ಗಂಟೆ ವಿದ್ಯುತ್‌ ಪೂರೈಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಜ್ಯೋತಿ ಫೀಡರ್‌ಗಳಿಗೆ 22ರಿಂದ 24 ಗಂಟೆ, ಪಂಪ್‌ಸೆಟ್‌ ಮತ್ತು ಮಿಶ್ರ ಫೀಡರ್‌ಗಳಿಗೆ 7 ಗಂಟೆ ತ್ರಿ ಫೇಸ್‌, 9 ಗಂಟೆ ಸಿಂಗಲ್‌ ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

‘ಬೆಳಗ್ಗೆ 6 ಗಂಟೆಯಿಂದ ಸಂಜೆ 5ರ ಮಧ್ಯೆ ವಿದ್ಯುತ್ ಕೊರತೆ ಇಲ್ಲ. ರಾತ್ರಿ ಅವಧಿಯಲ್ಲಿ ಮಾತ್ರ ಕೊರತೆ ಎದುರಾಗಿದೆ. ಜಲಾಶಯಗಳಲ್ಲಿ ನೀರಿದ್ದರೂ ಜಲ ವಿದ್ಯುತ್‌ ಘಟಕಗಳಲ್ಲಿ ಬಳಕೆ ಮಾಡುತ್ತಿಲ್ಲ. ಬೇಸಿಗೆ ಅವಧಿಯಲ್ಲಿ ಬಳಸಿಕೊಳ್ಳಲು ಉಳಿಸಿಕೊಳ್ಳಲಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಜೊತೆಗಿನ ಒಪ್ಪಂದದಂತೆ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಾಗಿಲ್ಲ. ಕಲ್ಲಿದ್ದಲು ಕೊರತೆ ಸಂಬಂಧಿಸಿದಂತೆ ಕೇಂದ್ರ ಇಂಧನ ಸಚಿವ ಪೀಯೂಷ್‌ ಗೋಯಲ್‌ ಜೊತೆ ನಾನು ಮಾತನಾಡಿದ್ದೇನೆ. ಕೇಂದ್ರ ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳ ಜೊತೆ ಮುಖ್ಯ ಕಾರ್ಯದರ್ಶಿಯವರು ನಿರಂತರ ಸಂಪರ್ಕದಲ್ಲಿದ್ದಾರೆ. ಆದಷ್ಟು ಶೀಘ್ರ ಕಲ್ಲಿದ್ದಲು ದೊರಕುವ ಭರವಸೆಯೂ ಸಿಕ್ಕಿದೆ. ರೈಲಿನ ಮೂಲಕ ಕಲ್ಲಿದ್ದಲು ಸಾಗಣೆಗೆ ಹೆಚ್ಚಿನ ರೇಕ್ ನೀಡುವ ಭರವಸೆಯನ್ನು ಕೇಂದ್ರ ನೀಡಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಲ್ಲಿದ್ದಲು ಪೂರೈಕೆ ಮತ್ತು ಸಾಗಣೆ ಸಕಾಲದಲ್ಲಿ ಆಗುವುದನ್ನು ಖಾತರಿಪಡಿಸಲು ಕಲ್ಲಿದ್ದಲು ಸಚಿವಾಲಯ ಮತ್ತು ರೈಲ್ವೆ ಕೇಂದ್ರ ಕಚೇರಿಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದೂ ಅವರು ಹೇಳಿದರು.

‘ವಿದ್ಯುತ್‌ ಖರೀದಿಸುವ ಪ್ರಶ್ನೆಯೇ ಇಲ್ಲ. ಜನವರಿಯಲ್ಲಿ 5 ಲಕ್ಷ ಟನ್‌ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಅಲ್ಪಾವಧಿ ಟೆಂಡರ್‌ ಕರೆಯಲು ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಆಂತರಿಕ ಮೂಲಗಳಿಂದ ಕಳೆದ ವರ್ಷ ಶೇ 32ರಷ್ಟು ವಿದ್ಯುತ್‌ ಪೂರೈಕೆ ಆಗಿದೆ. ಈ ವರ್ಷ ಶೇ 18ರಷ್ಟು ಮಾತ್ರ ಪೂರೈಕೆಯಾಗಿದೆ’ ಎಂದು ವಿವರಿಸಿದರು.

ಸಿ.ಎಂ ಆಕ್ರೋಶ– ಭಾವುಕತೆ

‘ದೀಪಾವಳಿಗೆ ಲೋಡ್‌ ಶೆಡ್ಡಿಂಗ್‌ ಮೈತ್ರಿ ಸರ್ಕಾರದ ಉಡುಗೊರೆ’, ‘ಕತ್ತಲೆಗೆ ತಳ್ಳಿದ ಕುಮಾರ’ ಎಂದೆಲ್ಲ ಮಾಧ್ಯಮಗಳು ನನ್ನ ವಿರುದ್ಧ ಸುದ್ದಿ ಮಾಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ‘ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿಯ ಮಾಹಿತಿಯನ್ನು ನೀವು ತಪ್ಪಾಗಿ ಅರ್ಥೈಸಿದ್ದೀರಿ. ಮೊದಲು ಕನ್ನಡ ಓದಲು ಕಲಿಯಿರಿ. ನೀವು ಮಾಡುವುದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದೆ’ ಎಂದು ಕಿಡಿಕಾರಿದರು.

‘ಅತಿ ಒಳ್ಳೆತನ ಇರಬಾರದು ಎಂದು ವಿವೇಕಾನಂದರೇ ಒಮ್ಮೆ ಹೇಳಿದ್ದಾರೆ. ನಾಗರಿಕರಲ್ಲಿ ಕೆಟ್ಟ ಅಭಿಪ್ರಾಯ ಬರಬಾರದು ಎಂದು ಹೇಳಿದ್ದೇನೆ. ಸರ್ಕಾರ ತಪ್ಪು ಮಾಡಿದರೆ ತಿಳಿಸಿ. ನಾನು ಸುಮ್ಮನೆ ಕುಳಿತಿಲ್ಲ. ಆರೋಗ್ಯ ಸರಿ ಇಲ್ಲದಿದ್ದರೂ ಒಂದೊಂದು ಕ್ಷಣವೂ ಈ ನಾಡಿನ ಜನರ ಬಗ್ಗೆ ಯೋಚನೆ ಮಾಡುತ್ತೇನೆ’ ಎಂದು ಭಾವುಕರಾದರು.

* ಲೋಡ್‌ ಶೆಡ್ಡಿಂಗ್‌ ತೀರ್ಮಾನ ಮಾಡಿಲ್ಲ. ಸೌರ ಮತ್ತು ಜಲ ವಿದ್ಯುತ್ ಮೂಲದಿಂದ ವಿದ್ಯುತ್‌ ಕೊರತೆ ಸರಿದೂಗಿಸಲಾಗುತ್ತಿದೆ

-ಎಚ್‌.ಡಿ. ಕುಮಾರಸ್ವಾಮಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.