ADVERTISEMENT

ರಾಜಕೀಯವಾಗಿ ಸಿ.ಟಿ.ರವಿ ಮುಗಿಸುವ ಹುನ್ನಾರ ನಡೆದಿದೆ: ಸಂಸದ ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 9:41 IST
Last Updated 12 ಜನವರಿ 2025, 9:41 IST
<div class="paragraphs"><p>ಜಗದೀಶ ಶೆಟ್ಟರ್‌</p></div>

ಜಗದೀಶ ಶೆಟ್ಟರ್‌

   

ಬೆಳಗಾವಿ: ‘ಹಿಂದುತ್ವದ ಬಗ್ಗೆ ಹೋರಾಡುವ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿಧಾನಮಂಡಲ ಚಳಿಗಾಲ ಅಧಿವೇಶನದ ವೇಳೆ, ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ರವಿ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿತ್ತು. ಈಗ ಅವರಿಗೆ ಬೆದರಿಕೆ ಪತ್ರ ಬರೆಯಲಾಗಿದೆ. ಇದರಿಂದ ರಾಜ್ಯದಲ್ಲಿ ಕಾನೂನು ‌ಮತ್ತು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ. ಅರಾಜಕತೆ ಸೃಷ್ಟಿಯಾಗಿದೆ ಎಂಬುದು ತಿಳಿಯುತ್ತದೆ’ ಎಂದು ದೂರಿದರು.

ADVERTISEMENT

‘ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ಏಜೆಂಟರಂತೆ ಪೊಲೀಸರು ವರ್ತಿಸುವುದು ಸರಿಯಲ್ಲ. ಇಲ್ಲಿನ ಗುಂಡಾ ಸಂಸ್ಕೃತಿಯನ್ನು ‌ಜನರು ವಿರೋಧಿಸುತ್ತಾರೆ. ಸುವರ್ಣ ವಿಧಾನಸೌಧದಲ್ಲಿ ಗುಂಡಾಗಿರಿ ಮಾಡಿದವರು ಮತ್ತು ಈಗ ರವಿ ಅವರಿಗೆ ಬೆದರಿಕೆ ಪತ್ರ ಬರೆದವರನ್ನು ಮೊದಲು ಬಂಧಿಸುವ ಕೆಲಸವಾಗಬೇಕು’ ಎಂದು ಒತ್ತಾಯಿಸಿದರು.

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಕುರಿತು ಮಾತನಾಡಿದ ಅವರು, ‘ಪ್ರಧಾನಿ ಭೇಟಿಯಾಗಿ, ಜಿಲ್ಲೆಯ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದೇನೆ. ರೈಲ್ವೆ ಸಚಿವರಿಗೆ ಹಲವು ಬಾರಿ ಭೇಟಿಯಾದರೂ, ಧಾರವಾಡ–ಬೆಂಗಳೂರು ವಂದೇ ಭಾರತ್‌ ರೈಲಿನ ಸೇವೆ ಬೆಳಗಾವಿಗೆ ವಿಸ್ತರಣೆಯಾಗಿಲ್ಲ. ತಾವು ಮಧ್ಯಪ್ರವೇಶಿಸಿ, ನಮಗೆ ನ್ಯಾಯ ಒದಗಿಸಬೇಕು. ಜತೆಗೆ, ಉಡಾನ್ ಯೋಜನೆಯನ್ನೂ ಮುಂದುವರಿಸುವಂತೆ ಕೋರಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.