ಬೆಂಗಳೂರು: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಜವಾಬ್ದಾರಿ ನೀಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಸದ್ಯಕ್ಕೆ ನಾನೇ ಅಧ್ಯಕ್ಷ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ರಚನೆ ಬಗ್ಗೆ ವಾರ ಅಥವಾ 10 ದಿನಗಳಲ್ಲಿ ಅಂತಿಮ ತೀರ್ಮಾನ ಮಾಡುತ್ತೇವೆ. ಬೆಂಗಳೂರಿಗೆ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ಆಗಬಹುದು. ಪ್ರಮುಖ ನಾಯಕರ ಸಮಿತಿ ಪುನರ್‌ರಚನೆ ಕುರಿತು ಚರ್ಚೆಗಳು ನಡೆದಿವೆ’ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಬಗ್ಗೆ ತಾವು ಈ ಹಿಂದೆ ಆಡಿದ್ದ ಮಾತಿನ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಯನ್ನು ಸುದ್ದಿಗಾರರು ಪ್ರಸ್ತಾಪಿಸಿದಾಗ ಕುಮಾರಸ್ವಾಮಿ ಅವರು, ‘ಆರ್‌ಎಸ್‌ಎಸ್ ಅನ್ನು ನಾನು ಹಿಂದೆ ಟೀಕೆ ಮಾಡಿದ್ದೇನೆ. ಇಲ್ಲ ಎಂದು ಎಲ್ಲೂ ಹೇಳಿಲ್ಲ. ಆ ಬಗ್ಗೆ ಚರ್ಚಿಸುವ ಬದಲು, ಕಲಬುರಗಿ ಜಿಲ್ಲೆಯಲ್ಲಿ ಮಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಯನ್ನು ಆಲಿಸಿ. ಮೊದಲು ಅವರಿಗೆ ಪರಿಹಾರ ನೀಡಿ’ ಎಂದರು.
‘ಕೆಲವು ದಿನಗಳ ಹಿಂದೆ ರೈತರು ಬೆಳೆ ನಷ್ಟದ ಪರಿಹಾರ ಕೇಳಲು ಹೋದಾಗ ಅವರ ತಂದೆ, ತಮ್ಮ ಹೊಲದಲ್ಲಿ 40 ಎಕರೆ ಬೆಳೆ ನಷ್ಟ ಆಗಿದೆ. ತಾವು ಯಾರ ಬಳಿ ಹೋಗಲಿ ಎಂದು ಪ್ರಶ್ನಿಸಿದ್ದರು. ನನ್ನ ರಾಜಕೀಯ ಹೇಗಿರಬೇಕು ಎಂದು ಅಂತಹವರಿಂದ ಕಲಿಯಬೇಕಾ’ ಎಂದು ಪ್ರಶ್ನಿಸಿದರು.
‘ಅಧಿಕಾರಕ್ಕಾಗಿ ಜೆಡಿಎಸ್ ಕೇಸರಿಕರಣವಾಗಿದೆ ಎಂದೂ ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದವರು ಕಾಂಗ್ರೆಸ್‌ನವರು. ಅದಕ್ಕೂ ಮುನ್ನ ನಾವು ಬಿಜೆಪಿಯೊಂದಿಗೆ ಸೇರಿ ಅಧಿಕಾರ ಮಾಡಿದ್ದೆವು ಎನ್ನುವುದು ಅವರಿಗೆ ಗೊತ್ತಿರಲಿಲ್ಲವೇ. ಕಾಂಗ್ರೆಸ್‌ನವರು ಅಧಿಕಾರ ಹಿಡಿಯಲು ಬೇಕಾದಾಗ ನಮ್ಮ ಹತ್ತಿರ ಬರುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ದೇಶದಲ್ಲಿ ಕಾಂಗ್ರೆಸ್ ಪಕ್ಷವೇ 50 ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದೆ. ಹಿಂದೆ ಕರ್ನಾಟಕದಲ್ಲೂ ಕಾಂಗ್ರೆಸ್‌ನ 28 ಲೋಕಸಭಾ ಸದಸ್ಯರನ್ನು ಗೆಲ್ಲಿಸಿ ಕಳುಹಿಸಲಾಗಿತ್ತು. ಆಗ ಕೇಂದ್ರ, ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗಿನ ಲೋಕಸಭಾ ಸದಸ್ಯರು ಕರ್ನಾಟಕಕ್ಕೆ ಏನು ಕೊಡಿಸಿದ್ದರು ಎನ್ನುವುದನ್ನೂ ಸಿದ್ದರಾಮಯ್ಯ ಮಾತನಾಡಲಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.