ಹುಬ್ಬಳ್ಳಿ: ‘ಸದನದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳಿಂದ ತುಂಬಾ ನೋವಾಗಿದೆ. ಈ ಸ್ಥಾನದಲ್ಲಿ ಮುಂದುವರಿಯುವುದ
ರಲ್ಲಿ ಅರ್ಥ ಇಲ್ಲ ಎಂಬ ಭಾವನೆ ಬರುತ್ತಿದೆ. ಹೀಗಾಗಿ ರಾಜೀನಾಮೆ ನೀಡಲು ನಿರ್ಧಾರ ಕೈಗೊಂಡಿದ್ದೇನೆ. ಆದರೆ ಇನ್ನೂ ರಾಜೀನಾಮೆ ನೀಡಿಲ್ಲ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.
ಹೊರಟ್ಟಿ ಅವರ ರಾಜೀನಾಮೆ ಪತ್ರ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಅವರು ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
‘ರಾಜೀನಾಮೆ ಪತ್ರ ಸಿದ್ಧಪಡಿಸಲಾಗಿತ್ತು. ಆ ಪತ್ರವನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದು ಈ ರೀತಿ ಮಾಡಿದ್ದಾರೆ. ಪತ್ರಕ್ಕೆ ನಾನು ಸಹಿ ಮಾಡಿಲ್ಲ. ಸದನದಲ್ಲಿ ಆಗಿರುವ ಬೆಳವಣಿಗೆಗಳಿಂದ ನೊಂದಿದ್ದೇನೆ. ಆದ್ದರಿಂದ ಸ್ನೇಹಿತರ ಹಾಗೂ ಹಿತೈಷಿಗಳ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
ಇದಕ್ಕೂ ಮುನ್ನ ಬೆಳಿಗ್ಗೆ ಅವರು ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಭಾಪತಿ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತೇನೆಯೋ ಗೊತ್ತಿಲ್ಲ. ಈ ಸ್ಥಾನದಲ್ಲಿರಲು ಯೊಗ್ಯನಾಗಿದ್ದೇನೋ, ಇಲ್ಲವೋ, ನನ್ನದು ಅಥವಾ ಬೇರೆಯವರ ತಪ್ಪೋ ಗೊತ್ತಿಲ್ಲ. ನಾನು ಯಾರನ್ನೂ ದೂಷಿಸುವುದಿಲ್ಲ. ಒಟ್ಟಿನಲ್ಲಿ ಈ ಸ್ಥಾನದಲ್ಲಿ ಮುಂದುವರಿಯುವುದರಲ್ಲಿ ಅರ್ಥ ಇಲ್ಲ ಎಂಬ ಭಾವನೆ ಬರುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು.
ಮೂಕಪ್ರೇಕ್ಷಕನಂತೆ ಕೂರಬೇಕಾಗಿದೆ:
‘ಶಾಸಕರನ್ನು ಅಮಾನತು ಮಾಡುವುದು ಒಳ್ಳೆಯ ಸಂಪ್ರದಾಯ ಅಲ್ಲ. ವಿಧಾನ ಪರಿಷತ್‌ನಲ್ಲಿ ಅಂತಹ ತೀರ್ಮಾನ ಮಾಡಿಲ್ಲ. ಸಿ.ಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರ ಪ್ರಕರಣವನ್ನು ನನ್ನ ಅನುಭವ ಆಧರಿಸಿ ತೀರ್ಮಾನ ಮಾಡಿದ್ದೇನೆ. ವಿಧಾನ ಪರಿಷತ್ತಿನಲ್ಲಿ ಜೈಕಾರ, ಧಿಕ್ಕಾರ ಕೂಗಬಾರದು ಎಂಬ ನಿಯಮ ಇದೆ. ಇದು ಪಾಲನೆಯಾಗುತ್ತಿಲ್ಲ. ಹೀಗಾಗಿ ಮೂಕಪ್ರೇಕ್ಷಕನಂತೆ ಕೂರಬೇಕಾಗಿದೆ’ ಎಂದು ಬೇಸರಿಸಿದರು.
ಹೊರಟ್ಟಿಯವರ ಭಾವನೆ ಗೌರವಿಸುತ್ತೇನೆ. ಅವರ ಕಳವಳ ಅರ್ಥವಾಗಿದೆ. ಹನಿಟ್ರ್ಯಾಪ್ ವಿಷಯ ನಮಗೂ ಮುಜುಗರ ತಂದಿದೆಸಂತೋಷ್ ಲಾಡ್, ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.