ADVERTISEMENT

ಉತ್ತರ ಕರ್ನಾಟಕದವರು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲ: ಕೋರೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 15:22 IST
Last Updated 30 ಜನವರಿ 2021, 15:22 IST
ಪ್ರಭಾಕರ ಕೋರೆ
ಪ್ರಭಾಕರ ಕೋರೆ    

ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ): ಎಲ್ಲ ಕ್ಷೇತ್ರಗಳಲ್ಲೂ ಅನ್ಯಾಯವನ್ನು ಸಹಿಸಿಕೊಂಡು ಬಂದ ಉತ್ತರ ಕರ್ನಾಟಕದವರು ಮುಂದೊಂದು ದಿನ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲ' ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಇಲ್ಲಿನ ಮಲ್ಲಿಕಾರ್ಜುನ ವಿದ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

'ಪ್ರತ್ಯೇಕ ರಾಜ್ಯದ ಕೂಗು ಸಮರ್ಥನೀಯ ಅಲ್ಲದಿದ್ದರೂ‌ ಪರಿಸ್ಥಿತಿಗಳು ಆ ಕೂಗಿಗೆ ಪೂರಕವಾಗಿ ಕಾಣುತ್ತಿವೆ. ಆದ್ದರಿಂದ ಕನ್ನಡಿಗರು ಭೌಗೋಳಿಕವಾಗಿ ಒಂದಾದರೆ ಸಾಲದು, ಭಾವನಾತ್ಮಕವಾಗಿ ಒಂದಾಗಬೇಕು. ನಮ್ಮ ಈ ಭಾಗದ ಜನಪ್ರತಿನಿಧಿಗಳು ಸದಾಕಾಲ ಹೋರಾಡುತ್ತಲೇ ಇರಬೇಕು' ಎಂದು ಆಶಿಸಿದರು.

ADVERTISEMENT

'ಇಂದು ಕನ್ನಡ ಪ್ರದೇಶಗಳು ರಾಜಕೀಯವಾಗಿ ಒಂದುಗೂಡಿವೆ. ಆದರೆ, ಏಕೀಕರಣದ ಒಟ್ಟು ಆಶಯ ಈಡೇರಿಲ್ಲ' ಎಂದು ವಿಷಾದ ವ್ಯಕ್ತಪಡಿಸಿದರು.

'ಗಡಿ ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸಿ ಅಲ್ಲಿ ಕನ್ನಡ ವಾತಾವರಣ ನಿರ್ಮಿಸಲು ಪ್ರಬಲ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು ಎಂದು ಸಲಹೆ ನೀಡಿದರು.

'ಸರ್ಕಾರ ಯಾವುದೇ ಇದ್ದರೂ ಆಡಳಿತ ನಿರ್ವಹಣೆಯಲ್ಲಿ ಅಧಿಕಾರಿಗಳಿಂದ ಪಕ್ಷಪಾತ ಎದ್ದು ಕಾಣುತ್ತಿದೆ‌. ಪ್ರಾದೇಶಿಕ ಅಸಮತೋಲನ ಎಲ್ಲ ಕ್ಷೇತ್ರಗಳಲ್ಲೂ ಎದ್ದು ಕಾಣುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಬಂದಷ್ಟು ನೀರಾವರಿ ಯೋಜನೆಗಳು ಉತ್ತರದಲ್ಲಿ ಬಂದಿಲ್ಲ. ಸರ್ಕಾರಿ ಶಾಲೆ, ಕಾಲೇಜು ಹಾಗೂ ಉದ್ಯಮಗಳ ವಿಷಯದಲ್ಲೂ ಇದೇ ಸ್ಥಿತಿ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಬೆಂಗಳೂರಿನ ಕಲಾವಿದರು ಹಾಗೂ ಸಾಹಿತಿಗಳಿಗೇ ಮೀಸಲಿಟ್ಟಂತೆ ಹಂಚಿ ಹೋಗುತ್ತದೆ. ಪ್ರಶಸ್ತಿಗಳೂ ಹಾಗೆಯೇ ಆಗಿವೆ. ಕೆಲವೇ ಕೆಲವು ರಾಜಕೀಯ ಬೆಂಬಲಿತ ವ್ಯಕ್ತಿಗಳನ್ನು ಮಾತ್ರ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಅಕಾಡೆಮಿಗಳಲ್ಲಿ ಉತ್ತರ ಕರ್ನಾಟಕದವರಿಗೆ ಸ್ಥಾನಮಾನಗಳೆ ಸಿಕ್ಕಿಲ್ಲ' ಎಂದು ಪಟ್ಟಿ ಮಾಡಿದರು.

ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಿರುವ ಪ್ರಭಾಕರ ಕೋರೆ

* ಗಡಿ ನಾಡಿನ ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳಿಗೆ ಸರ್ಕಾರ ವಿಶೇಷ ಅನುದಾನ ನೀಡಿ ಕನ್ನಡ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು.

* ರಾಜ್ಯದ ಯಾವುದೇ ಗಡಿ ಭಾಗವಿರಲಿ, ಅಲ್ಲೆಲ್ಲ ಕನ್ನಡ ಭಾಷೆ ಹಾಗೂ ಕನ್ನಡ ಕಾರ್ಯಕ್ರಮಕ್ಕೆ ಅವಕಾಶ ಕೊಡಬೇಕು. ಗಡಿಯಲ್ಲಿರುವ ಜನಪ್ರತಿನಿಧಿಗಳು ಕನ್ನಡ ಹಾಗೂ ಸಾಂಸ್ಕೃತಿಕ ಪ್ರೀತಿಯನ್ನು ಹೊಂದಿರಬೇಕು. ಇತರರಲ್ಲೂ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು.

* ಸರ್ಕಾರ ಎಂದರೆ ಬೆಂಗಳೂರು ಮಾತ್ರವಲ್ಲ ಎನ್ನುವುದನ್ನು ಅರಿತು ಸಕಾರಾತ್ಮಕ ಮನೋಭಾವ ಹೊಂದಬೇಕು. ವಿವಿಧ ಅಕಾಡೆಮಿಗಳಿಗೆ ಗಡಿನಾಡಿನ ಪ್ರತಿನಿಧಿಗಳನ್ನು ನೇಮಿಸಿ ಪ್ರೋತ್ಸಾಹಿಸಬೇಕು. ಗಡಿ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

* ಗಡಿ ಆಚೆ, ಗಡಿ ಈಚೆಯ ಕುರಿತು ಸಂಪೂರ್ಣ ಅಧ್ಯಯನ ಮಾಡಿದ ಕಳಕಳಿಯ ಹೋರಾಟಗಾರರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೇಮಿಸಬೇಕು. ಗಡಿ ಕನ್ನಡಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

* ಆಡಳಿತದಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡ ಬಳಸದವರಿಗೆ ಬಳಸುವಂತೆ ಕಿವಿ ಹಿಂಡಬೇಕು. ಕನ್ನಡಕ್ಕಾಗಿ ದುಡಿಯುವವರಿಗೆ ಎಲ್ಲ ರೀತಿಯ ಬೆಂಬಲ ಕೊಡಬೇಕು.

* ಹೊರಗಿನವರು ಬಂದು ನಮ್ಮ ಭಾಷೆ ನಾಶ ಮಾಡಬಾರದು.

* ಇಂಗ್ಲಿಷ್ ಪ್ರಭಾವದಿಂದ ಕನ್ನಡ ಮಾಧ್ಯಮ ಅವಸಾನದತ್ತ ಸಾಗುತ್ತಿರುವುದರಲ್ಲಿ ಎರಡು ಮಾತಿಲ್ಲ.

* ಗಡಿ ಭಾಗದ ಜನರು ತೆರೆದ ಮನಸ್ಸಿನಿಂದ ಕನ್ನಡವನ್ನು ಒಪ್ಪಿಕೊಂಡರೆ ಹಾಗೂ ಕನ್ನಡಿಗರನ್ನು ಅಪ್ಪಿಕೊಂಡರೆ ಕಲಿಯುವುದೇನೂ ಕಷ್ಟವಾಗುವುದಿಲ್ಲ.

* ಗಡಿ ಸಮಸ್ಯೆ ಅದು ಮುಗಿದ ಅಧ್ಯಾಯ. ಅದನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಜನರ ಭಾವನೆಗಳನ್ನು ಕೆದಕಬಾರದು. ಕನ್ನಡ ಹಾಗೂ ಮರಾಠಿ ಭಾಷಿಗರ ನಡುವೆ ಇರುವ ಸೌಹಾರ್ದಕ್ಕೆ ಧಕ್ಕೆ ತರದಂತೆ ಇರುವುದು ಮೇಲು.

* ಗಡಿ ಭಾಗದ ಕನ್ನಡ ಶಾಲೆಗಳು ಮೂಲಸೌಕರ್ಯಗಳಿಲ್ಲದೆ ಬಳಲುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೌಲಭ್ಯ ಒದಗಿಸಬೇಕು.

* ಪ್ರೌಢಶಾಲಾ ಹಂತದವರೆಗಿನ ಶಿಕ್ಷಣವನ್ನು ಕನ್ನಡದಲ್ಲಿ ಬರೆದವರಿಗೆ ಸರ್ಕಾರಿ ನೌಕರಿ ದೊರೆಯುವಂತಾದರೆ ಕನ್ನಡಕ್ಕೆ ಬೇಡಿಕೆ ಬರಬಹುದು. ಸಾಹಿತ್ಯವೂ ಉದ್ಧಾರವಾಗಬಹುದು. ಮಕ್ಕಳ ಸಂಖ್ಯೆ ಕಡಿಮೆಯಾದ ತಕ್ಷಣ ಶಾಲೆಗಳನ್ನು ಮುಚ್ಚಬಾರದು. ಆ ಶಾಲೆಗಳ ಸುಧಾರಣೆಗೆ ಯತ್ನಿಸಬೇಕು. ಶಿಕ್ಷಕರನ್ನು ನೇಮಿಸಿ ಅವರಿಗೆ ಸೌಲಭ್ಯಗಳನ್ನು ಕೊಟ್ಟರೆ ಶಾಲೆಗಳನ್ನು ಮುಚ್ಚುವ ಪ್ರಸಂಗ ಬರಲಾರದು.

**

ವ್ಯಾಪಾರಿ ಭಾಷೆ ಬೇರೆ, ಮಾತೃಭಾಷೆ ಬೇರೆ. ಮರಾಠಿಯಲ್ಲಿ ಹಿಂದೊಮ್ಮೆ ರಸೀದಿ ನೀಡಿದಾಕ್ಷಣ ಬೆಳಗಾವಿ ಮಹಾರಾಷ್ಟ್ರದ್ದು ಆಗುವುದಿಲ್ಲ. ಮುಂಬೈ ಕರ್ನಾಟಕಕ್ಕೆ ಸೇರಿಸಿ ಅಂತ ಏಕೆ ಕೇಳಬಾರದು ಎನ್ನುವ ಲಕ್ಷ್ಮಣ ಸವದಿ ಆಗ್ರಹ ಸಮಂಜಸವಾಗಿದೆ. ಮಹಾನಗರ ಪಾಲಿಕೆ ಚುನಾವಣೆ ಬಂದಿರುವುದರಿಂದ ಕೆಲವರು ತಗಾದೆ ತೆಗೆಯುತ್ತಿದ್ದಾರೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.