ADVERTISEMENT

ಭೂಪರಿವರ್ತನೆ ಇನ್ನಷ್ಟು ಸರಳೀಕರಣಕ್ಕೆ ಚಿಂತನೆ: ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 10:58 IST
Last Updated 16 ಜೂನ್ 2020, 10:58 IST
   

ಬೆಂಗಳೂರು:‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ 30 ದಿನಗಳಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ, ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಭೂ ಪರಿವರ್ತನೆಯಾಗುವ ಸರಳೀಕೃತ ವಿಧಾನ ಜಾರಿ ತರುವ ಚಿಂತನೆ ಇದೆ’ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಸಣ್ಣ ಕೈಗಾರಿಕೆಗಳು ಹಾಗೂ ಕೃಷಿ ವಲಯಕ್ಕೆ ಆಗಲಿರುವ ಅನುಕೂಲಗಳನ್ನು ಕುರಿತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಕಾಯ್ದೆಯ ಹಳೆಯ ನಿಯಮದಂತೆ ಒಂದು ಕೈಗಾರಿಕೆ ಸ್ಥಾಪನೆಗೆ ಅರ್ಜಿ ಸಲ್ಲಿಸಿದರೆ, ಐದರಿಂದ ಹತ್ತು ವರ್ಷ ಕಾಯಬೇಕಿತ್ತು. ಈ ನಿಯಮ ಸಡಿಲಗೊಳಿಸಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದರ ಅನ್ವಯ 30 ದಿನಗಳೊಳಗೆ ಭೂಪರಿವರ್ತನೆ ಪೂರ್ಣಗೊಳ್ಳಲಿದ್ದು, ಈ ವಿಧಾನವನ್ನು ಇನ್ನಷ್ಟು ಸರಳಗೊಳಿಸುವ ಕುರಿತು ಅಧ್ಯಯನ ಕೈಗೊಂಡಿದ್ದೇನೆ. ಇದನ್ನು ಶೀಘ್ರದಲ್ಲೇ ಚಾಲ್ತಿಗೆ ತರಲು ಪ್ರಯತ್ನಿಸುತ್ತೇನೆ’ಎಂದರು.

ADVERTISEMENT

‘ರಾಜ್ಯದಲ್ಲಿ ಅಂದಾಜು ಶೇ 80ರಷ್ಟು ಸಣ್ಣ ಕೈಗಾರಿಕೆಗಳು ಬಾಡಿಗೆ ಜಾಗದಲ್ಲಿವೆ. ಈ ಕಾಯ್ದೆ ತಿದ್ದುಪಡಿಯಿಂದ ಸ್ವಂತ ಜಾಗದಲ್ಲಿ ಕೈಗಾರಿಕೆಗಳನ್ನು ಆರಂಭಿಸಬಹುದು. ರಾಜ್ಯದಲ್ಲಿ 50 ಲಕ್ಷ ಎಕರೆಗಳಷ್ಟು ಭೂಮಿಯಲ್ಲಿ ಉಳುಮೆ ಮಾಡುತ್ತಿಲ್ಲ. ಕಚ್ಛಾ ವಸ್ತುಗಳು, ಮಾನವ ಸಂಪನ್ಮೂಲ ಇರುವ ಜಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ, ಸುಮಾರು 90 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಕೃಷಿ ಸಂಪತ್ತು ಹೆಚ್ಚುವ ಜೊತೆಗೆ ಗ್ರಾಮೀಣ ಅಭಿವೃದ್ಧಿಗೂ ಮಾರ್ಗವಾಗಲಿದೆ’ಎಂದರು.

‘20 ವರ್ಷಗಳ ಹಿಂದೆಯೇ ಈ ತಿದ್ದುಪಡಿ ನಡೆದಿದ್ದರೆ ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿರುತ್ತಿತ್ತು. ಕಾಯ್ದೆಯ ತಿದ್ದುಪಡಿ ಪ್ರಸ್ತಾಪ ಬಂದಾಗ ಹಲವರು ನನ್ನನ್ನು ರೈತ ವಿರೋಧಿ ಎಂದರು. ಅವರಿಗೆ ಸರಿಯಾದ ಪ್ರತ್ಯುತ್ತರವನ್ನೂ ನೀಡಿದ್ದೇನೆ. ಉಳುವವರಿಗೂ ಭೂಮಿ ಸಿಗಬೇಕು ಎನ್ನುವುದು ನಮ್ಮ ಉದ್ದೇಶ. ಮುಂದಿನ ಹತ್ತು ದಿನಗಳಲ್ಲಿ ಕಾಯ್ದೆಯ ತಿದ್ದುಪಡಿ ಆದೇಶ ಹೊರಬರಲಿದೆ’ಎಂದರು.

ಕಾಸಿಯಾ ಅಧ್ಯಕ್ಷ ಸಿ.ಆರ್.ರಾಜು, ‘ಕೆಲ ಕೈಗಾರಿಕೆಗಳಿಗೆ ನೆರೆಹೊರೆ ರಾಜ್ಯಗಳನ್ನು ಅಲವಲಂಬಿಸಬೇಕಿತ್ತು. ಕೃಷಿ ಉತ್ಪನ್ನಗಳ ರಫ್ತಿನಲ್ಲಿ ರಾಜ್ಯ ಐದನೇ ಸ್ಥಾನದಲ್ಲಿದೆ. ಈ ಕಾಯ್ದೆ ತಿದ್ದುಪಡಿ ಆಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಮೊದಲ ಸ್ಥಾನಕ್ಕೇರುವುದರಲ್ಲಿ ಅನುಮಾನವಿಲ್ಲ’ಎಂದರು.

ಸಂವಾದದಲ್ಲಿ ಹುಬ್ಬಳ್ಳಿ, ಉಡುಪಿ, ದಾವಣಗೆರೆ, ತುಮಕೂರು, ಕಲಬುರ್ಗಿ ಸೇರಿ ವಿವಿಧ ಜಿಲ್ಲಾ ಮಟ್ಟದ ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

‘ಹಾರದ ಬದಲು ಮಾಸ್ಕ್, ಸ್ಯಾನಿಟೈಸರ್ ತನ್ನಿ’
‘ಕನಿಷ್ಟ ಇನ್ನೂ ಒಂದು ವರ್ಷದವರೆಗೆ ಕಾರ್ಯಕ್ರಮಗಳಿಗೆ ಬರುವವರು ಹೂವಿನ ಹಾರ ಹಾಗೂ ಶಾಲು ತರುವ ಬದಲಿಗೆ ಮಾಸ್ಕ್ ಹಾಗೂ ಸ್ಯಾನಿಟೈರ್‍ಗಳನ್ನು ತನ್ನಿ. ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯ ರಕ್ಷಣೆಯ ಕಡೆಗೆ ಎಲ್ಲರೂ ಹೆಚ್ಚಿನ ಒತ್ತು ನೀಡಬೇಕು’ಎಂದು ಸಚಿವ ಆರ್.ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.