ADVERTISEMENT

ಉತ್ತರ ಕರ್ನಾಟಕ ಅಭಿವೃದ್ಧಿ: ಸರ್ಕಾರ ಗಮನಹರಿಸಲಿ: ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 12:44 IST
Last Updated 16 ಡಿಸೆಂಬರ್ 2018, 12:44 IST
ತೋಂಟದ ಸಿದ್ಧರಾಮ ಸ್ವಾಮೀಜಿ
ತೋಂಟದ ಸಿದ್ಧರಾಮ ಸ್ವಾಮೀಜಿ   

ಬೆಳಗಾವಿ: ಉತ್ತರ ಕರ್ನಾಟಕದ ಕೃಷಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವು ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಗಮನಹರಿಸಬೇಕು ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಒತ್ತಾಯಿಸಿದ್ದಾರೆ.

‘ಹಲವು ವರ್ಷಗಳಿಂದ ಈ ಭಾಗದ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಇದರಿಂದ, ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಭಾವನೆ ಬಲಗೊಳ್ಳುತ್ತಿದೆ. ಹೀಗಾಗಿ, ಪರಿಹಾರ ಕ್ರಮಗಳನ್ನು ಕೈಕೊಂಡು ಈ ಭಾಗದ ಜನರಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ಭಾವನೆಗಳು ಜಾಗ್ರತಗೊಳ್ಳದಂತೆ ನೋಡಿಕೊಳ್ಳಬೇಕು. ಇದು ತ್ವರಿತವಾಗಿ ಆಗಬೇಕಿದ್ದು, ಮುಖ್ಯಮಂತ್ರಿ ಇತ್ತ ಗಮನಹರಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಜಿಲ್ಲೆಗಳ ಅನೇಕ ಕೆರೆ– ಕಾಲುವೆಗಳಿಗೆ ನೀರು ಹರಿಸಿಲ್ಲ. ಕಳಸಾ ಬಂಡೂರಿ ಮತ್ತು ಮಹದಾಯಿ ಬಗ್ಗೆ ಯೋಚಿಸಿಲ್ಲ. ರೈತರು ನೂರಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅವರ ಗೋಳು ಹೇಳತೀರದು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಉತ್ತರ ಕರ್ನಾಟಕದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಪಾಲಿಟೆಕ್ನಿಕ್ ಹಾಗು ಪದವಿ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲಾಗುವುದು ಎಂದು ಹಿಂದೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಈವರೆಗೂ ಅನುದಾನ ದೊರೆತಿಲ್ಲ. ಈ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ನೌಕರರು ಅನುದಾನ ನಿರೀಕ್ಷೆಯಲ್ಲಿದ್ದಾರೆ. 10–12 ವರ್ಷಗಳಿಂದ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಅವಕಾಶ ಕಲ್ಪಿಸಿಲ್ಲ. ಇದರಿಂದಾಗಿ, ಶಾಲೆಗಳು ದುಃಸ್ಥಿತಿಯಲ್ಲಿವೆ. ಸರಿಯಾದ ಕಟ್ಟಡ ಮೊದಲಾದ ಮೂಲಸೌಕರ್ಯಗಳಿಲ್ಲ’ ಎಂದು ತಿಳಿಸಿದ್ದಾರೆ.

‘ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಎಲ್ಲ ರೀತಿಯಿಂದಲೂ ಉತ್ತರ ಕರ್ನಾಟಕದ ಕಡಗಣನೆ ಅಗುತ್ತಿರುವುದರಿಂದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಗಟ್ಟಿಗೊಳ್ಳುತ್ತಿದೆ. ಮುಖ್ಯಮಂತ್ರಿ ಕೊಟ್ಟ ಭರವಸೆ ಈಡೇರದ ಕಾರಣ ಪ್ರತ್ಯೇಕ ರಾಜ್ಯದ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಕೆಲವೆಡೆ ಪ್ರತ್ಯೇಕ ಧ್ವಜಾರೋಹಣದ ಸಿದ್ಧತೆಗಳೂ ನಡೆದಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾನೂನು ಸುವ್ಯವಸ್ಥೆಗೆ ಭಂಗ ಬರುತ್ತದೆ. ಹೀಗಾಗಿ, ಸರ್ಕಾರವು ಈ ಭಾಗವನ್ನು ನಿರ್ಲಕ್ಷಿಸಿಲ್ಲ ಎಂಬುದನ್ನು ಕೃತಿಯ ಮೂಲಕ ತೋರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.