ADVERTISEMENT

ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿರುವವರು ಪುಂಡ ಮುಸ್ಲಿಮರು: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 12:20 IST
Last Updated 15 ಆಗಸ್ಟ್ 2020, 12:20 IST
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ   

ಮಡಿಕೇರಿ: ‘ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿರುವ ಮುಸ್ಲಿಮರು ಪುಂಡ ಮುಸ್ಲಿಮರು’ ಎಂದು ಸಂಸದ ಪ್ರತಾಪ‌ ಸಿಂಹ ವಾಗ್ದಾಳಿ ನಡೆಸಿದರು.

‘ನಿಜವಾದ ಮುಸ್ಲಿಮರಿಗೂ, ಎಸ್‌ಡಿಪಿಐನಲ್ಲಿ ಇರುವ ಮುಸ್ಲಿಮರಿಗೂ ಸಾಕಷ್ಟು ವ್ಯತ್ಯಾಸವಿದೆ. ನಿಜವಾದ ಮುಸ್ಲಿಮರು, ಈ ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡು ಜನರನ್ನು ಪ್ರೀತಿಸುತ್ತಿದ್ದಾರೆ. ಆದರೆ, ಎಸ್‌ಡಿಪಿಐನಲ್ಲಿ ಇರುವ ಮುಸ್ಲಿಮರು ಸಮಾಜಘಾತುಕ ಶಕ್ತಿಗಳು’ ಎಂದು ಭಾಗಮಂಡಲದಲ್ಲಿ ಶನಿವಾರ ಹೇಳಿದರು.

‘ಮೊದಲು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಎಸ್‌ಡಿ‍ಪಿಐ ಕಾರ್ಯಕರ್ತರು, ಈಗ ಕಾಂಗ್ರೆಸ್‌ ಮುಖಂಡರ ಮೇಲೆಯೇ ದಾಳಿ ನಡೆಸಲು ಶುರು ಮಾಡಿದ್ದಾರೆ. ರಾಜಕೀಯ ಪಕ್ಷವಾಗಿ ಕೆಲಸ ಮಾಡುತ್ತಿರುವ ಎಸ್‌ಡಿಪಿಐ ಅನ್ನು ನಿಷೇಧ ಮಾಡುವುದಕ್ಕೆ ಕೆಲವು ಮಾನದಂಡಗಳಿವೆ. ಆ ಪ್ರಕಾರವೇ ಎಸ್‌ಡಿಪಿಐ ಅನ್ನು ನಿಷೇಧ ಮಾಡುತ್ತೇವೆ’ ಎಂದರು.

ADVERTISEMENT

‘ಈ ಹಿಂದೆ ನಡೆದಿದ್ದ ಕೆಲವು ಹತ್ಯೆ, ದಾಳಿಯಲ್ಲೂ ಎಸ್‌ಡಿಪಿಐ, ಪಿಐಎಫ್‌ ಪಾತ್ರವಿರುವುದು ಸಾಬೀತಾಗಿದೆ. ಕೇಂದ್ರಕ್ಕೆ ರಾಜ್ಯದಿಂದ ಸಮರ್ಥವಾದ ವರದಿ ಹೋಗಲಿದೆ. ಬಳಿಕ ಕೇಂದ್ರವು ಕ್ರಮ ಕೈಗೊಳ್ಳಲಿದೆ’ ಎಂದರು.
‘ದಿನೇಶ‌ ಗುಂಡೂರಾವ್‌ ಅವರು ಸಾಕಷ್ಟು ಓದಿಕೊಂಡಿದ್ದಾರೆ. ಒಳ್ಳೆಯ ಹಿನ್ನೆಲೆ ಇರುವವರು. ಆದರೆ, ಯಾವಾಗಲೂ ದಾರಿತಪ್ಪಿಸುವ, ಸತ್ಯಕ್ಕೆ ದೂರವಾದ ಮಾತನ್ನೇ ಆಡುತ್ತಿದ್ದಾರೆ. ಮನೆಯಲ್ಲಿ ಅವರಿಗೆ ಒತ್ತಡ ಇರಬಹುದು’ ಎಂದು ಟೀಕಿಸಿದರು.

ಮಡಿಕೇರಿಯಲ್ಲಿ ಸಚಿವ ವಿ.ಸೋಮಣ್ಣ ಮಾತನಾಡಿ, ‘ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿದ್ದಾಗ ಬೆಂಗಳೂರಿನಲ್ಲಿ ನಡೆದಿದ್ದ ಗಲಭೆ ವಿಚಾರವಾಗಿ ಹೇಗೆ ಸ್ಪಂದಿಸಿದ್ದಾರೋ ಗೊತ್ತಿಲ್ಲ. ಆದರೆ, ಒಂದು ಧರ್ಮವನ್ನು ಓಲೈಸಿ ರಾಜಕಾರಣ ಮಾಡುವುದು ಒಳ್ಳೆಯದಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.