ಪ್ರಾತಿನಿಧಿಕ ಚಿತ್ರ
ಮೆಟಾ ಎಐ
ಬೆಂಗಳೂರು: ಮಲೆ ಮಹದೇಶ್ವರಬೆಟ್ಟ ವನ್ಯಜೀವಿ ವಿಭಾಗದ ವ್ಯಾಪ್ತಿಯ ಕಾವೇರಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ ಮೂರು ಕಿರು ಜಲವಿದ್ಯುತ್ ಯೋಜನೆ ಆರಂಭಿಸಲು ಸಲ್ಲಿಸಿರುವ ಪ್ರಸ್ತಾವನೆಗಳನ್ನು ತಿರಸ್ಕರಿಸುವಂತೆ ಪರಿಸರ ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಈ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ, ಹುಲಿಗಳನ್ನು ವಿಷವಿಟ್ಟುಕೊಲ್ಲಲಾಗಿದೆ. ಮತ್ತೆ ಅರಣ್ಯದಲ್ಲಿ ಜಲ ವಿದ್ಯುತ್ ಯೋಜನೆಗಳಿಗೆ ಅವಕಾಶ ಕೊಟ್ಟಿದ್ದೇ ಆದರೆ, ಮಾನವ– ವನ್ಯಜೀವಿ ಸಂಘರ್ಷ ತಾರಕಕ್ಕೆ ಏರುವುದರಲ್ಲಿ ಸಂದೇಹವಿಲ್ಲ’ ಎಂದು ಪರಿಸರ ಸಂರಕ್ಷಣ ಕಾರ್ಯಕರ್ತ ಗಿರಿಧರ ಕುಲಕರ್ಣಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಪಚ್ಚೆದೊಡ್ಡಿ ಹುಲಿ ಸಾವಿನ ತನಿಖೆ ಸಮಿತಿಯ ಮುಖ್ಯಸ್ಥೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಾವೇರಿ ನದಿ ತೀರದ ಹುಲಿ ಮತ್ತು ಆನೆ ಸಂಚಾರದ ಮಾರ್ಗಗಳ ಪಕ್ಕದಲ್ಲೇ ಮೂರು ಜಲವಿದ್ಯುತ್ ಕಂಪನಿಗಳ ಸ್ಥಾವರಗಳು ಬರಲಿವೆ. ಮೂರು ಪ್ರಸ್ತಾವನೆಗಳ ಪೈಕಿ, ಪಯನಿಯರ್ ಪವರ್ ಕಾರ್ಪೊರೇಷನ್ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ಗ್ರಾಮದಲ್ಲಿ 4.863 ಹೆಕ್ಟೇರ್ ಹಾಗೂ ಸತ್ತೇಗಾಲದಲ್ಲಿ ಭರಚುಕ್ಕಿ 2x2.5 ಮೆ.ವಾ ಕಿರು ಜಲವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲು ಅರಣ್ಯ ಭೂಮಿ ಬಳಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಬಾಲಾಜಿ ಕಾವೇರಿ ಹೈಡ್ರೊ ಯೋಜನೆ(ಶಿವನಸಮುದ್ರ)– ಮೆಸರ್ಸ್ ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಹಿಂದೆ ಪಯನಿಯರ್ ಕಂಪನಿಗೆ ನೀಡಿದ್ದ 4.863 ಹಕ್ಟೇರ್ ಭೂಮಿಯನ್ನು ಮರು ಹಂಚಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಉದ್ದೇಶಿತ ಮೂರು ಕಿರು ಜಲ ವಿದ್ಯುತ್ ಜಲ ವಿದ್ಯುತ್ ಯೋಜನೆಗಳ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ವನ್ಯಜೀವಿ ಆವಾಸಸ್ಥಾನ ಛಿದ್ರಗೊಂಡು, ಮಾನವ–ವನ್ಯಜೀವಿ ಸಂಘರ್ಷ ಇನ್ನಷ್ಟು ಹೆಚ್ಚಲಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಆದ್ದರಿಂದ, ಭವಿಷ್ಯದಲ್ಲಿ ಈ ಭಾಗದಲ್ಲಿ ಕಿರು ಜಲ ವಿದ್ಯುತ್ ಯೋಜನೆಗಳು ಮತ್ತು ವಾಣಿಜ್ಯ ಉದ್ದೇಶದ ಪ್ರವಾಸೋದ್ಯಮಕ್ಕೆ ಅರಣ್ಯ ಪರಿವರ್ತನೆ ಮಾಡಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಹುಲಿಗಳ ಸಾವಿನ ತನಿಖೆ ಕೇವಲ ತಾತ್ಕಾಲಿಕ ಕಾರಣಗಳನ್ನು ಮಾತ್ರವಲ್ಲ, ಪರಿಸರ ಹಾನಿಯ ಮೂಲವನ್ನು ಸಹ ಪರಿಗಣಿಸಬೇಕು. ದೀರ್ಘಕಾಲೀನ ಉಪಶಮನ ಕ್ರಮಗಳನ್ನು ಕೈಗೊಳ್ಳಲು ಶಿಫಾರಸು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.