ADVERTISEMENT

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು

ಬ್ಯಾಂಕ್‌ಗೆ ವಂಚನೆ ಆರೋಪ ಸಾಬೀತು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 15:21 IST
Last Updated 6 ಫೆಬ್ರುವರಿ 2025, 15:21 IST
ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ
ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ   

ಬೆಂಗಳೂರು: ‘ಬ್ಯಾಂಕ್‌ಗೆ ವಂಚಿಸಿದ ಆರೋಪದಡಿಯ ಕ್ರಿಮಿನಲ್‌ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ಜನಪ್ರತಿನಿಧಿಗಳ ಸೆಷನ್ಸ್‌ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಈ ಕುರಿತಂತೆ ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಗುರುವಾರ ಪ್ರಕಟಿಸಿದರು.

ಭ್ರಷ್ಟಾಚಾರ ನಿವಾರಣಾ ಕಾಯ್ದೆ–1988ರ ಕಲಂ 120 ಬಿ, 420, 467 ಮತ್ತು 471ರ ಅಡಿಯಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದ್ದು, ಕೃಷ್ಣಯ್ಯ ಶೆಟ್ಟಿ ಅವರಿಗೆ ₹5.25 ಲಕ್ಷ ಹಾಗೂ ಮೊದಲನೇ ಆರೋಪಿ ಎಂಟಿವಿ ರೆಡ್ಡಿ ಅವರಿಗೆ ₹7.75 ಲಕ್ಷ ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮುನಿರಾಜು ಮತ್ತು ಶ್ರೀನಿವಾಸ್ ಅವರೂ ಶಿಕ್ಷೆಗೆ ಗುರಿಯಾಗಿದ್ದಾರೆ.

ADVERTISEMENT

ಇದೇ ವೇಳೆ ಕೃಷ್ಣಯ್ಯ ಶೆಟ್ಟಿ ಪರ ವಕೀಲ ನಾಗೇಂದ್ರ ನಾಯಕ್ ಅವರ ಮನವಿಯ ಮೇರೆಗೆ ನ್ಯಾಯಾಧೀಶರು ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತಿನಲ್ಲಿ ಇರಿಸಿ ಆದೇಶಿಸಿದ್ದು, ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಿದ್ದಾರೆ. ₹5.25 ಲಕ್ಷ ಬಾಂಡ್‌ ಹಾಗೂ ಒಬ್ಬರ ಭದ್ರತೆ ಒದಗಿಸಲು ನಿರ್ದೇಶಿಸಿದ್ದಾರೆ.

ಪ್ರಕರಣವೇನು?: ‘ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ ಮಾಲೀಕರಾಗಿದ್ದರು. ಈ ವೇಳೆ ಅವರು ಬಿಟಿಎಸ್, ಕೆಎಸ್‌ಆರ್‌ಟಿಸಿ, ಬಿಎಸ್‌ಎನ್‌ಎಲ್, ಐಟಿಐ, ಎಚ್‌ಎಎಲ್, ಬಿಇಎಂಎಲ್ ಮತ್ತು ಎಡಿಇ ಸಾರ್ವಜನಿಕ ಉದ್ದಿಮೆಗಳ 181 ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಹೇಳಿ ವಂಚನೆ ನಡೆಸಿದ್ದಾರೆ. ಬ್ಯಾಂಕ್‌ನಿಂದ ಪಡೆದಿದ್ದ ಮೊತ್ತದಲ್ಲಿ ₹3.53 ಕೋಟಿ ಸಾಲ ತೀರಿಸಿಲ್ಲ ಹಾಗೂ ₹7.17 ಕೋಟಿ ಸಾಲಕ್ಕೆ ನಕಲಿ ದಾಖಲೆ ಸೃಷ್ಟಿಸಲಾಗಿದೆ’ ಎಂದು ಆರೋಪಿಸಲಾಗಿತ್ತು. ಮುಖ್ಯ ವಿಚಕ್ಷಣಾ ದಳದ ಅಂದಿನ ಮುಖ್ಯಸ್ಥ ಆರ್.ಡಿ.ನಾಯ್ಡು ನೀಡಿದ್ದ ದೂರು ಆಧರಿಸಿ, ಸಿಬಿಐ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.