ADVERTISEMENT

ನಟ ಕಮಲ್‌ ಹಾಸನ್‌ ಇನ್ನೂ ಕ್ಷಮೆ ಕೇಳಿಲ್ಲವೇ? ಕರ್ನಾಟಕ ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:27 IST
Last Updated 13 ಜೂನ್ 2025, 16:27 IST
<div class="paragraphs"><p>ನಟ ಕಮಲ್‌ ಹಾಸನ್‌</p></div>

ನಟ ಕಮಲ್‌ ಹಾಸನ್‌

   

ಬೆಂಗಳೂರು: ವಿವೇಚನೆಯು ಶೌರ್ಯದ ಅತ್ಯುತ್ತಮ ಭಾಗ ಎಂಬುದನ್ನು ಮತ್ತೊಮ್ಮೆ ನೆನಪಿಸಲಾಗುತ್ತಿದೆ ಎಂದು ಮಾರ್ನುಡಿದಿರುವ ಹೈಕೋರ್ಟ್‌, ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಿರುವ ಖ್ಯಾತ ನಟ ಕಮಲ್‌ ಹಾಸನ್‌ ಇನ್ನೂ ಕ್ಷಮೆ ಕೇಳಿಲ್ಲವೇ ಎಂದು ಮೌಖಿಕವಾಗಿ ಪ್ರಶ್ನಿಸಿದೆ.

ಕರ್ನಾಟಕದಲ್ಲಿ ‘ಥಗ್‌ ಲೈಫ್‌ʼ ಸಿನಿಮಾ ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ‘ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ’ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ನಾರಾಯಣನ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ADVERTISEMENT

ಮನೆಯೊಳಗಣ ಕಿಚ್ಚು: ‌ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಪರ ಪದಾಂಕಿತ ಹಿರಿಯ ವಕೀಲ ಎಸ್‌.ಬಸವರಾಜ್‌ ಹಾಜರಾಗಿ, ‘ಅರ್ಜಿದಾರರು ಕಾನೂನು ದುರ್ಬಳಕೆ ಮಾಡಿಕೊಂಡು ನಂತರ ನ್ಯಾಯಾಲಯದ ಮುಂದೆ ಬಂದಿದ್ದಾರೆ. ಅವರ ಈ ನಡೆ, ಮನೆಗೆ ಬೆಂಕಿ ಹಾಕಿ, ಅದನ್ನು ನಂದಿಸಲು ಸಹಾಯ ಮಾಡಿ ಎಂದು ಕೇಳುವ ರೀತಿಯಲ್ಲಿದೆ’ ಎಂದರು. ಅಂತೆಯೇ, ‘ಮನೆಯೊಳಗಣ ಕಿಚ್ಚು ಮನೆಯ ಸುಡದಲ್ಲದೆ, ನೆರೆಮನೆಯ ಸುಡದು ಕೂಡಲ ಸಂಗಮದೇವಾ’... ಎಂಬ ಬಸವಣ್ಣನವರ ವಚನವನ್ನು ಉದ್ಧರಿಸುವ ಮೂಲಕ, ‘ಕಮಲ್‌ ತಮ್ಮ ನಡತೆಯ ಮೂಲಕ ಮನೆಗೆ ಬೆಂಕಿ ಹಚ್ಚಿಕೊಂಡಿದ್ದಾರೆ’ ಎಂದು ಛೇಡಿಸಿದರು.

ಮಹಾಭಾರತ, ಮಾರ್ಕಂಡೇಯ ಪುರಾಣ, ಕಥಾ ಸರಿತ್ಸಾಗರ, ಮೃಚ್ಛಕಟಿಕ ನಾಟಕ, ಸ್ಕಂದ ಪುರಾಣ, ಪ್ರಾಕೃತ... ಇತ್ಯಾದಿಗಳಲ್ಲಿ ಕರ್ನಾಟಕ ಪದ ಬಳಕೆಯ ಆಕರ ಗ್ರಂಥಗಳ ಪಟ್ಟಿಯನ್ನೇ ನ್ಯಾಯಪೀಠಕ್ಕೆ ವಿವರಿಸಿದ ಬಸವರಾಜು, ‘ಪ್ರತಿಯೊಬ್ಬರೂ ಇನ್ನೊಂದು ಭಾಷೆ, ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಗೌರವಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಇದರಿಂದ ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಸಾಧ್ಯ. ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವ ಮೂಲಕ ಕಮಲ್‌ ಹಾಸನ್‌ ನೀಡಿರುವುದು ಮೂರ್ಖ ಹೇಳಿಕೆ ಎನ್ನುವುದನ್ನು ನಾನು ಸಾಬೀತುಪಡಿಸುತ್ತೇನೆ’ ಎಂದರು.

‘ಮೂರ್ಖ’ ಎಂಬ ಪದ ಬಳಕೆಗೆ ರಾಜ್‌ಕಮಲ್ ಫಿಲ್ಮ್ಸ್‌ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಂತೆಯೇ, ನ್ಯಾಯಮೂರ್ತಿ ನಾಗಪ್ರಸನ್ನ ಅವರೂ ಇದನ್ನು ಆಕ್ಷೇಪಿಸಿದರಲ್ಲದೆ, ‘ನ್ಯಾಯಾಲಯದಲ್ಲಿ ಯಾರನ್ನೂ ಮೂರ್ಖ ಎಂದು ಕರೆಯುವುದು ಸರಿಯಲ್ಲ’ ಎಂದರು.

ಕಸಾಪ ಅರ್ಜಿ: ‘ಕನ್ನಡ ಭಾಷೆಯ ಇತಿಹಾಸ, ಸಂಸ್ಕೃತಿ ಪರಂಪರೆಯನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಅರ್ಜಿಯಲ್ಲಿ ನಮ್ಮನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಲು ಅನುಮತಿ ನೀಡಬೇಕು’ ಎಂದು ಕೋರಿರುವ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಕಾಲಾವಕಾಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.